ಸಿಖ್ಖರ ವಿರುದ್ಧ 'ಅವಹೇಳನಕಾರಿ' ಹೇಳಿಕೆ: ಮುಂಬೈನಲ್ಲಿ ನಟಿ ಕಂಗನಾ ವಿರುದ್ಧ ಎಫ್ಐಆರ್ ದಾಖಲು
ಸಾಮಾಜಿಕ ಮಾಧ್ಯಮದಲ್ಲಿ ಸಿಖ್ ಸಮುದಾಯದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಬಾಲಿವುಡ್ ನಟಿ ಕಂಗನಾ ರನೌತ್ ಅವರ ವಿರುದ್ಧ ಮುಂಬೈ ಪೊಲೀಸರು ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ...
Published: 23rd November 2021 07:57 PM | Last Updated: 23rd November 2021 07:57 PM | A+A A-

ಕಂಗನಾ
ಮುಂಬೈ: ಸಾಮಾಜಿಕ ಮಾಧ್ಯಮದಲ್ಲಿ ಸಿಖ್ ಸಮುದಾಯದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಬಾಲಿವುಡ್ ನಟಿ ಕಂಗನಾ ರನೌತ್ ಅವರ ವಿರುದ್ಧ ಮುಂಬೈ ಪೊಲೀಸರು ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ(ಡಿಎಸ್‌ಜಿಎಂಸಿ) ಬಾಲಿವುಡ್ ನಟಿಯ ವಿರುದ್ಧ ದೂರು ಸಲ್ಲಿಸಿದ ಒಂದು ದಿನದ ನಂತರ ಉಪನಗರ ಖಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನು ಓದಿ: ಸಿಖ್ ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ ಆರೋಪ: ಕಂಗನಾ ನಿವಾಸಕ್ಕೆ ಪೊಲೀಸ್ ಭದ್ರತೆ
ಭಾರತೀಯ ದಂಡ ಸಂಹಿತೆ(IPC)ಯ ಸೆಕ್ಷನ್ 295A(ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಯಾವುದೇ ಒಂದು ವರ್ಗದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು) ಅಡಿ ರನೌತ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಡಿಎಸ್‌ಜಿಎಂಸಿ ನಿಯೋಗದ ಭಾಗವಾಗಿದ್ದ ಮುಂಬೈ ಮೂಲದ ಉದ್ಯಮಿ ಅಮರಜೀತ್ ಸಿಂಗ್ ಸಂಧು ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದು, ನಟಿ ಕಂಗನಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಸಿಖ್ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ: ಭಾರತ ಸಹ ಜಿಹಾದಿ ರಾಷ್ಟ್ರ: ಕೃಷಿ ಕಾಯ್ದೆ ಹಿಂಪಡೆದಿದ್ದಕ್ಕೆ ನಟಿ ಕಂಗನಾ ಆಕ್ರೋಶ
ಕಂಗನಾ ಅವರು ರೈತರ ಪ್ರತಿಭಟನೆಯನ್ನು ಉದ್ದೇಶಪೂರ್ವಕವಾಗಿ ಖಲಿಸ್ತಾನಿ ಆಂದೋಲನಕ್ಕೆ ಹೋಲಿಸಿದ್ದಾರೆ ಹಾಗೂ ಸಿಖ್ ಸಮುದಾಯವನ್ನು ಖಲಿಸ್ತಾನಿ ಉಗ್ರರು ಎಂದು ಬಿಂಬಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ ಎಂದು ಖಾರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
1984ರಲ್ಲಿ ಮತ್ತು ಅದಕ್ಕೂ ಮೊದಲಿನ ಸಾಮೂಹಿಕ ಹತ್ಯೆ ಮತ್ತು ನರಮೇಧವನ್ನು ನೆನಪಿಸಿಕೊಂಡಿರುವ ಕಂಗನಾ, ಇವು ಆಗಿನ ಪ್ರಧಾನಿ ಇಂದಿರಾಗಾಂಧಿ ಅವರ ವ್ಯಾವಹಾರಿಕ ಮತ್ತು ಯೋಜಿತ ನಡೆ. ಸಿಖ್ ಸಮುದಾಯದವರು ಇಂದಿರಾ ಅವರ ಷೂ ಕೆಳಗೆ ನಲುಗಿದರು ಎಂದು ಅವಹೇಳನಕಾರಿ ಭಾಷೆ ಬಳಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.