ಇಡಬ್ಲ್ಯೂಎಸ್ ಮೀಸಲಾತಿಗೆ 8 ಲಕ್ಷ ರೂ. ವಾರ್ಷಿಕ ಆದಾಯ ಮಿತಿ ಮರುಪರಿಶೀಲನೆ: ಸುಪ್ರೀಂಗೆ ಕೇಂದ್ರ
ನೀಟ್- ಸ್ನಾತಕೋತ್ತರ ವೈದ್ಯಕೀಯ ಪ್ರವೇಶಕ್ಕಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದವರ (ಇಡಬ್ಲ್ಯೂಎಸ್) ಮೀಸಲಾತಿಗೆ ನಿಗದಿಪಡಿಸಿರುವ 8 ಲಕ್ಷ ರೂಪಾಯಿ ವಾರ್ಷಿಕ ಆದಾಯದ ಮಾನದಂಡವನ್ನು ಮರು ಪರಿಶೀಲನೆ ಮಾಡುವುದಾಗಿ
Published: 25th November 2021 06:47 PM | Last Updated: 25th November 2021 06:47 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ನೀಟ್- ಸ್ನಾತಕೋತ್ತರ ವೈದ್ಯಕೀಯ ಪ್ರವೇಶಕ್ಕಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದವರ (ಇಡಬ್ಲ್ಯೂಎಸ್) ಮೀಸಲಾತಿಗೆ ನಿಗದಿಪಡಿಸಿರುವ 8 ಲಕ್ಷ ರೂಪಾಯಿ ವಾರ್ಷಿಕ ಆದಾಯದ ಮಾನದಂಡವನ್ನು ಮರು ಪರಿಶೀಲನೆ ಮಾಡುವುದಾಗಿ ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ಸೂರ್ಯ ಕಾಂತ್ ಮತ್ತು ವಿಕ್ರಮ್ ನಾಥ್ ಅವರ ಪೀಠಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಮಾಹಿತಿ ನೀಡಿದ್ದು, ಇಡಬ್ಲ್ಯೂಎಸ್ ಮಾನದಂಡಗಳನ್ನು ನಿರ್ಧರಿಸಲು ಸಮಿತಿಯನ್ನು ರಚಿಸಲಾಗುವುದು ಮತ್ತು ಇದಕ್ಕೆ ನಾಲ್ಕು ವಾರಗಳ ಕಾಲಾವಕಾಶ ಬೇಕು ಎಂದು ಹೇಳಿದ್ದಾರೆ.
ಇದನ್ನು ಓದಿ: ವೈದ್ಯಕೀಯ ಸೀಟುಗಳಲ್ಲಿ ಒಬಿಸಿಗೆ ಶೇ. 27, ಇಡಬ್ಲ್ಯೂಎಸ್ ಗೆ ಶೇ. 10 ಮೀಸಲಾತಿ ಘೋಷಿಸಿದ ಸರ್ಕಾರ
ಈ ಹಿಂದೆ ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ನೀಟ್(ಪಿಜಿ) ಕೌನ್ಸೆಲಿಂಗ್ ಅನ್ನು ಇನ್ನೂ ನಾಲ್ಕು ವಾರಗಳ ಕಾಲ ಮುಂದೂಡಲಾಗುವುದು ಎಂದು ಮೆಹ್ತಾ ಅವರು ಸುಪ್ರೀಂ ಕೋರ್ಟ್ ಗೆ ತಿಳಿಸಿದರು.
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶದಲ್ಲಿ ಇತರೆ ಹಿಂದುಳಿದ ವರ್ಗಕ್ಕೆ(ಒಬಿಸಿ) ಶೇ. 27 ಮತ್ತು ಇಡಬ್ಲ್ಯುಎಸ್ ವರ್ಗಕ್ಕೆ ಶೇ. 10 ಮೀಸಲಾತಿ ನೀಡುವ ಕೇಂದ್ರ ಮತ್ತು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ(ಎಂಸಿಸಿ)ಯ ಜುಲೈ 29 ರಂದು ಹೊರಡಿಸಿದ್ದ ಸೂಚನೆಯನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.
ಈ ವೇಳೆ ಇಡಬ್ಲ್ಯೂಎಸ್ ಕೋಟಾವು ಅತ್ಯಂತ ಸಕ್ರಿಯಗೊಳಿಸುವ ಮತ್ತು ಪ್ರಗತಿಪರ ರೀತಿಯ ಮೀಸಲಾತಿಯಾಗಿದೆ. ಕೇಂದ್ರ ಸರ್ಕಾರದ ಈ ಪ್ರಯತ್ನವನ್ನು ಎಲ್ಲಾ ರಾಜ್ಯಗಳು ಬೆಂಬಲಿಸಬೇಕು ಎಂದು ನ್ಯಾಯಮೂರ್ತಿ ಕಾಂತ್ ಅವರು ಹೇಳಿದರು.