2008ರ ಮುಂಬೈ ಉಗ್ರರ ದಾಳಿಗೆ 13 ವರ್ಷ: ಹುತಾತ್ಮರಿಗೆ ಮಹಾರಾಷ್ಟ್ರ ಸರ್ಕಾರ ಗೌರವ, ಸ್ಮಾರಕಕ್ಕೆ ಭೇಟಿ

2008ನೇ ಇಸವಿ ನವೆಂಬರ್ 26ರಂದು ಮಹಾನಗರಿ ಮುಂಬೈ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗೆ ಹುತಾತ್ಮರಾದವರಿಗೆ ಇಂದು ಶುಕ್ರವಾರ ಗೌರವ ನಮನ ಸಲ್ಲಿಸಲಾಯಿತು.
ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ
ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ

ಮುಂಬೈ: 2008ನೇ ಇಸವಿ ನವೆಂಬರ್ 26ರಂದು ಮಹಾನಗರಿ ಮುಂಬೈ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗೆ ಹುತಾತ್ಮರಾದವರಿಗೆ ಇಂದು ಶುಕ್ರವಾರ ಗೌರವ ನಮನ ಸಲ್ಲಿಸಲಾಯಿತು. ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ದಕ್ಷಿಣ ಮುಂಬೈ ಪೊಲೀಸ್ ಕೇಂದ್ರ ಕಚೇರಿಗೆ ಆಗಮಿಸಿ ಸ್ಮಾರಕಗಳಿಗೆ ಗೌರವ ನಮನ ಸಲ್ಲಿಸಿದರು.

ಕರಾವಳಿ ರಸ್ತೆ ಯೋಜನೆಯಲ್ಲಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ಹುತಾತ್ಮರ ಸ್ಮಾರಕವನ್ನು ಮರೈನ್ ಡ್ರೈವ್‌ನ ಪೊಲೀಸ್ ಜಿಮ್ಖಾನಾದಲ್ಲಿರುವ ಮೂಲ ಸ್ಥಳದಿಂದ ಕ್ರಾಫರ್ಡ್ ಮಾರ್ಕೆಟ್‌ನಲ್ಲಿರುವ ಪೊಲೀಸ್ ಪ್ರಧಾನ ಕಚೇರಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆನ್ನುಮೂಳೆ ಶಸ್ತ್ರಚಿಕಿತ್ಸೆಯಿಂದ ಮುಂಬೈಯ ಆಸ್ಪತ್ರೆಯಲ್ಲಿ ಗುಣಮುಖ ಹೊಂದುತ್ತಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ 26/11 ಹುತಾತ್ಮರನ್ನು ನೆನಪಿಸಿಕೊಂಡಿದ್ದಾರೆ COVID-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮಾರಣಾಂತಿಕ ಭಯೋತ್ಪಾದನಾ ದಾಳಿಯ 13 ನೇ ವಾರ್ಷಿಕೋತ್ಸವದಲ್ಲಿ ಸೀಮಿತ ಸಂಖ್ಯೆಯ ಜನರು ಭಾಗವಹಿಸಿದ್ದರು.

ಹುತಾತ್ಮರಾದ ಕೆಲ ಪೊಲೀಸ್ ಸಿಬ್ಬಂದಿಯ ಕುಟುಂಬಸ್ಥರು ಸಹ ಸ್ಮಾರಕದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ಸಮಾರಂಭದಲ್ಲಿ, ಗಣ್ಯರು ಕೆಲವು ಹುತಾತ್ಮರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು.

ನವೆಂಬರ್ 26, 2008 ರಂದು, ಪಾಕಿಸ್ತಾನದಿಂದ 10 ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಸಮುದ್ರ ಮಾರ್ಗವಾಗಿ ಆಗಮಿಸಿ ಗುಂಡಿನ ದಾಳಿ ನಡೆಸಿದ್ದರು. ಮುಂಬೈಯ ತಾಜ್ ಹೊಟೇಲ್ ಸೇರಿದಂತೆ ಹಲವು ಕಡೆಗಳಲ್ಲಿ 60 ಗಂಟೆಗಳ ಕಾಲ ಮುತ್ತಿಗೆ ಹಾಕಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರನ್ನು ಉಗ್ರರು ಕೊಂದಿದ್ದರು. 

ಅಂದಿನ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮುಖ್ಯಸ್ಥ ಹೇಮಂತ್ ಕರ್ಕರೆ, ಸೇನಾ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮುಂಬೈನ ಹೆಚ್ಚುವರಿ ಪೊಲೀಸ್ ಕಮಿಷನರ್ ಅಶೋಕ್ ಕಾಮ್ಟೆ, ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಸಲಸ್ಕರ್ ಮತ್ತು ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ತುಕಾರಾಂ ಓಂಬ್ಳೆ ದಾಳಿಯಲ್ಲಿ ಮೃತಪಟ್ಟವರಲ್ಲಿ ಪ್ರಮುಖರಾಗಿದ್ದಾರೆ. 

ಮುಂಬೈಯ ಪ್ರತಿಷ್ಠಿತ ಕೇಂದ್ರಗಳಾದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಒಬೆರಾಯ್ ಟ್ರೈಡೆಂಟ್, ತಾಜ್ ಮಹಲ್ ಹೋಟೆಲ್, ಲಿಯೋಪೋಲ್ಡ್ ಕೆಫೆ, ಕಾಮಾ ಆಸ್ಪತ್ರೆ ಮತ್ತು ನಾರಿಮನ್ ಲೈಟ್ ಹೌಸ್ ನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ಮಾಡಿದ್ದರು. 

ನಂತರ ದೇಶದ ಗಣ್ಯ ಕಮಾಂಡೋ ಪಡೆಯಾದ ಎನ್‌ಎಸ್‌ಜಿಯ ಸಿಬ್ಬಂದಿ ಒಂಬತ್ತು ಭಯೋತ್ಪಾದಕರನ್ನು ಹತ್ಯೆಗೈದಿದ್ದರು. ಅಜ್ಮಲ್ ಕಸಬ್ ಮಾತ್ರ ಜೀವಂತವಾಗಿ ಸೆರೆ ಸಿಕ್ಕ ಭಯೋತ್ಪಾದಕನಾಗಿದ್ದ. ನಾಲ್ಕು ವರ್ಷಗಳ ನಂತರ ನವೆಂಬರ್ 21, 2012 ರಂದು ಆತನನ್ನು ಗಲ್ಲಿಗೇರಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com