New Covid Variant: ಆತಂಕಕಾರಿ ರೂಪಾಂತರಿ ‘ಓಮಿಕ್ರಾನ್’ ಬಗ್ಗೆ ಅತ್ಯಂತ ಜಾಗರೂಕರಾಗಿರಿ: WHO

ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೋವಿಡ್ ವೈರಸ್ ನ ಹೊಸ ರೂಪಾಂತರಿ ಓಮಿಕ್ರಾನ್ ಬಗ್ಗೆ ಅತ್ಯಂತ ಜಾಗರೂಕರಾಗಿರುವಂತೆ ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ. 
ಓಮಿಕ್ರಾನ್ ಕೋವಿಡ್ ವೈರಸ್-WHO
ಓಮಿಕ್ರಾನ್ ಕೋವಿಡ್ ವೈರಸ್-WHO

ಜಿನೀವಾ: ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೋವಿಡ್ ವೈರಸ್ ನ ಹೊಸ ರೂಪಾಂತರಿ ಓಮಿಕ್ರಾನ್ ಬಗ್ಗೆ ಅತ್ಯಂತ ಜಾಗರೂಕರಾಗಿರುವಂತೆ ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ. 

ವಿಶ್ವದಲ್ಲಿ ತಲ್ಲಣ ಮೂಡಿಸುತ್ತಿರುವ ಬಿ. 1.1. 529 ಕೊರೊನಾ ರೂಪಾಂತರಿ ಆತಂಕಕಾರಿ ರೂಪಾಂತರಿ ವೈರಸ್ ಪ್ರಬೇಧವಾಗಿದ್ದು, ಇದು ಡೆಲ್ಟಾ ರೂಪಾಂತರಕ್ಕಿಂತಲೂ ಅತ್ಯಂತ ವೇಗವಾಗಿ ಪ್ರಸರಿಸಬಲ್ಲದು ಎಂದು ಹೇಳಲಾಗುತ್ತಿದೆ. ಇದೇ ವಿಚಾರವಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಹತ್ವದ ಹೇಳಿಕೆ ನೀಡಿದ್ದು, ಹೊಸ ತಳಿ 'ಆತಂಕಕಾರಿ ರೂಪಾಂತರಿ' ಎಂದು ಗುರುತಿಸಿ, ಅದಕ್ಕೆ ಓಮಿಕ್ರಾನ್ ಎಂದು ನಾಮಕರಣಗೊಳಿಸಿದೆ. ಓಮಿಕ್ರಾನ್ ಎಂಬುದು ಗ್ರೀಕ್ ಹೆಸರಾಗಿದ್ದು, ಹೊಸ ರೂಪಾಂತರಿಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ ಎಂದು WHO ಸೂಚಿಸಿರುವುದು ಕಳವಳ ಉಂಟುಮಾಡಿದೆ. 

ಕಣ್ಗಾವಲು ಹೆಚ್ಚಿಸಿ, ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕ್ರಮಗಳನ್ನು ಬಲಪಡಿಸಿ
ಹೊಸ ಕೊರೋನವೈರಸ್ ರೂಪಾಂತರದ ಪತ್ತೆ ಮತ್ತು ಬೇರೆಡೆ ಪ್ರಕರಣಗಳ ಉಲ್ಬಣ ನಡುವೆಯೇ WHO ಶನಿವಾರ ಆಗ್ನೇಯ ಏಷ್ಯಾ ಪ್ರದೇಶದ ದೇಶಗಳನ್ನು ಕಣ್ಗಾವಲು ಹೆಚ್ಚಿಸಲು, ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕ್ರಮಗಳನ್ನು ಬಲಪಡಿಸಲು ಮತ್ತು ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಹೆಚ್ಚಿಸುವಂತೆ ಸೂಚಿಸಿದೆ. ಹಬ್ಬಗಳು ಮತ್ತು ಆಚರಣೆಗಳು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಒಳಗೊಂಡಿರಬೇಕು ಮತ್ತು ಜನಸಂದಣಿ ಮತ್ತು ದೊಡ್ಡ ಕೂಟಗಳನ್ನು ತಪ್ಪಿಸಬೇಕು. ನಮ್ಮ ಪ್ರದೇಶದ ಹೆಚ್ಚಿನ ದೇಶಗಳಲ್ಲಿ COVID-19 ಪ್ರಕರಣಗಳು ಕ್ಷೀಣಿಸುತ್ತಿವೆಯಾದರೂ, ಪ್ರಪಂಚದ ಬೇರೆಡೆ ಪ್ರಕರಣಗಳ ಉಲ್ಬಣವು ಮತ್ತು ಕಾಳಜಿಯ ಹೊಸ ರೂಪಾಂತರದ ದೃಢೀಕರಣವು ನಿರಂತರ ಅಪಾಯದ ಜ್ಞಾಪನೆಯಾಗಿದೆ ಮತ್ತು ನಾವು ನಮ್ಮ ಕೆಲಸವನ್ನು ಮುಂದುವರಿಸುವ ಅಗತ್ಯವನ್ನು ಹೊಂದಿದೆ. ವೈರಸ್‌ನಿಂದ ರಕ್ಷಿಸಲು ಮತ್ತು ಅದರ ಹರಡುವಿಕೆಯನ್ನು ತಡೆಯಲು ಉತ್ತಮವಾಗಿದೆ ಎಂದು ಆಗ್ನೇಯ ಏಷ್ಯಾ ವಲಯದ WHO ಪ್ರಾದೇಶಿಕ ನಿರ್ದೇಶಕಿ ಡಾ.ಪೂನಮ್ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.

ಆತಂಕಕಾರಿ ರೂಪಾಂತರಿ
ಸಾಮಾನ್ಯವಾಗಿ, ವೃರಸ್‌ ಪ್ರಸರಣ ತೀವ್ರವಾಗಿದ್ದು, ಲಸಿಕೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದ ಸಂದರ್ಭಗಳಲ್ಲಿ ಅದನ್ನು ಆತಂಕಕಾರಿ ರೂಪಾಂತರಿ ಪರಿಗಣಿಸಲಾಗುತ್ತದೆ. ವೈರಸ್‌ಗಳಲ್ಲಿ ಆನುವಂಶಿಕ ರೂಪಾಂತರಗಳು ಸಂಭವಿಸಿ, ಅಸು ರೋಗದ ಹರಡುವಿಕೆ, ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. WHO ಇದುವರೆಗೆ ಆಲ್ಫಾ, ಬೀಟಾ, ಗಾಮಾ, ಡೆಲ್ಟಾಗಳನ್ನು ಆತಂಕಕಾರಿ ರೂಪಾಂತರಿಗಳೆಂದು ಗುರುತಿಸಿದೆ. ಹೊಸದಾಗಿ Omicron ಆ ಪಟ್ಟಿಗೆ ಸೇರಿದೆ. ಇದರ ಜೊತೆಗೆ, ಇತರ ಎರಡು ರೀತಿಯ ವೈರಸ್‌ಗಳನ್ನು 'ಆಸಕ್ತಿಯ ರೂಪಾಂತರಿʼ ಎಂದು WHO ಗುರುತಿಸಿದ್ದು, ಅವುಗಳೆಂದರೆ ಲ್ಯಾಮ್ಡಾ ಮತ್ತು ಮೂ. ಈ ಪೈಕಿ ಲ್ಯಾಮ್ಡಾ ಮೊದಲು ಡಿಸೆಂಬರ್ 2020 ರಲ್ಲಿ ಪೆರುವಿನಲ್ಲಿ ಕಾಣಿಸಿಕೊಂಡಿತ್ತು. ಮೂ ಈ ವರ್ಷದ ಜನವರಿಯಲ್ಲಿ ಕೊಲಂಬಿಯಾದಲ್ಲಿ ಪತ್ತೆಯಾಗಿತ್ತು. 

ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ 'ಓಮಿಕ್ರಾನ್' ..
ಹೊಸ ರೂಪಾಂತರಿ ಓಮಿಕ್ರಾನ್ ಅನ್ನು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಗುರುತಿಸಲಾಗಿದೆ. ನಂತರ ಬೆಲ್ಜಿಯಂ, ಬೋಟ್ಸ್ವಾನಾ, ಹಾಂಗ್ ಕಾಂಗ್‌ನಲ್ಲಿ ಪ್ರಕರಣಗಳು ವರದಿಯಾಗಿವೆ. ಇದು ಇತರ ರೂಪಾಂತರಗಳಿಗಿಂತ ವೇಗವಾಗಿ ಹರಡಲಿದೆ. ಈ ಹಿಂದೆ ಕೊರೊನಾ ಸೋಂಕಿಗೆ ಒಳಗಾದವರು ಹಾಗೂ ಲಸಿಕೆ ಹಾಕಿಸಿಕೊಂಡವರಿಗೂ ವೈರಸ್‌ಗೆ ತುತ್ತಾಗುವ ಅಪಾಯವಿದೆ ಎಂದು  ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಒಮಿಕ್ರಾನ್ ಕೋವಿಡ್ ಪೀಡಿತ ದಕ್ಷಿಣ ಆಫ್ರಿಕಾಗೆ ನೆರವಾಗಿ: ಯುನಿಸೆಫ್
ಹೊಸ ಒಮಿಕ್ರಾನ್ ಕೊರೋನಾ ವೈರಸ್ ರೂಪಾಂತರದ ಹರಡುವಿಕೆಯ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾಗೆ ನೆರವು ಹೆಚ್ಚಿಸುವಂತೆ ಸರ್ಕಾರಗಳು ಮತ್ತು ಖಾಸಗಿ ವಲಯಕ್ಕೆ ಯುನಿಸೆಫ್ ಕರೆ ನೀಡಿದೆ.

ಈ ಕುರಿತು ಮಾತನಾಡಿರುವ ಯುನಿಸೆಫ್ ದಕ್ಷಿಣ ಆಫ್ರಿಕಾ ಮುಖ್ಯಸ್ಥ ಟಾಬಿ ಫ್ರಿಕರ್ ಅವರು, 'ಮಕ್ಕಳು ಮತ್ತು ಯುವಜನರು ಸಾಂಕ್ರಾಮಿಕದ ಕಾರಣ ಅವರ ಶಿಕ್ಷಣಕ್ಕೆ ಸಂಬಂಧಿಸಿದ ಅಡೆತಡೆ ಎದುರಿಸುತ್ತಿದ್ದಾರೆ. ಜೀವನೋಪಾಯವಿಲ್ಲದೆ ಕುಟುಂಬಗಳು ಕಂಗಾಲಾಗಿವೆ. ಕೋವಿಡ್-19 ಸಂಬಂಧಿತ ಪ್ರತಿಕ್ರಿಯೆಯನ್ನು ಹೆಚ್ಚಿಸಲು ಸರ್ಕಾರಗಳು ಮತ್ತು ಖಾಸಗಿ ವಲಯದಿಂದ ಹೆಚ್ಚುವರಿ ಬೆಂಬಲವನ್ನು ಕೋರುತ್ತೇವೆ. ದಕ್ಷಿಣ ಆಫ್ರಿಕಾವು ಈಗ ಕೋವಿಡ್ -19 ಲಸಿಕೆಗಳ ಉತ್ತಮ ಪೂರೈಕೆಯನ್ನು ಹೊಂದಿದ್ದರೂ, ಸಾಧ್ಯವಾದಷ್ಟು ಬೇಗ ಲಸಿಕೆಯನ್ನು ಪಡೆಯುವುದು ಸವಾಲಾಗಿದೆ. ಸಾಧ್ಯವಾದಷ್ಟು ಲಸಿಕೆಗಳನ್ನು ಪಡೆಯಲು ಯುನಿಸೆಫ್ ರಾಷ್ಟ್ರೀಯ ಮತ್ತು ಪ್ರಾಂತೀಯ ಮಟ್ಟದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸಿದೆ ಎಂದು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಹೊಸ ದಕ್ಷಿಣ ಆಫ್ರಿಕಾದ ತಳಿ ಒಮಿಕ್ರಾನ್ ಕಳವಳಕಾರಿ ಎಂದು ಗುರುತಿಸಿದೆ, ಇದು ಗ್ರೀಕ್ ವರ್ಣಮಾಲೆಯ 15ನೇ ಅಕ್ಷರವಾಗಿದೆ.

ಹೊಸ ರೂಪಾಂತರದ ಕುರಿತು ವರದಿಗಳ ನಂತರ, ಯುನೈಟೆಡ್ ಸ್ಟೇಟ್ಸ್, ಯುರೋಪಿಯನ್ ಯೂನಿಯನ್, ಕೆನಡಾ, ಇಸ್ರೇಲ್, ಆಸ್ಟ್ರೇಲಿಯಾ ಮತ್ತು ಇತರ ದೇಶಗಳು ಆರೋಗ್ಯದ ಕಾಳಜಿಯ ಮೇಲೆ ಹಲವಾರು ದಕ್ಷಿಣ ಆಫ್ರಿಕಾದ ರಾಷ್ಟ್ರಗಳಿಂದ ಪ್ರಯಾಣವನ್ನು ನಿರ್ಬಂಧಿಸಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com