'ಪೂನಿಯಾ ವಜಾಗೊಳಿಸಿ, ಬಿಜೆಪಿ ಉಳಿಸಿ': ಅಜ್ಮೀರ್ ಪತ್ರಿಕೆಯಲ್ಲಿ ರಾಜಸ್ಥಾನ ಬಿಜೆಪಿ ಮುಖ್ಯಸ್ಥರ ವಿರುದ್ಧ ಜಾಹೀರಾತು ಪ್ರಕಟ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜಸ್ಥಾನ ಭೇಟಿಗೂ ಮುನ್ನ, ಮಾಜಿ ಸಿಎಂ ವಸುಂಧರಾ ರಾಜೆ ಅವರ ಇತ್ತೀಚಿನ ಅಜ್ಮೀರ್ ಪ್ರವಾಸದ ಸಂದರ್ಭದಲ್ಲಿ ನೀಡಿದ ಜಾಹೀರಾತೊಂದು ರಾಜ್ಯ ಬಿಜೆಪಿಯಲ್ಲಿ ಇದೀಗ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.
Published: 29th November 2021 12:59 PM | Last Updated: 29th November 2021 12:59 PM | A+A A-

ದಿನಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಜಾಹೀರಾತು.
ಜೈಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜಸ್ಥಾನ ಭೇಟಿಗೂ ಮುನ್ನ, ಮಾಜಿ ಸಿಎಂ ವಸುಂಧರಾ ರಾಜೆ ಅವರ ಇತ್ತೀಚಿನ ಅಜ್ಮೀರ್ ಪ್ರವಾಸದ ಸಂದರ್ಭದಲ್ಲಿ ನೀಡಿದ ಜಾಹೀರಾತೊಂದು ರಾಜ್ಯ ಬಿಜೆಪಿಯಲ್ಲಿ ಇದೀಗ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ವಸುಂದರಾ ರಾಜೇ ಅವರನ್ನು ಬೆಂಬಲಿಸುವ ಈ ಜಾಹೀರಾತಿನಲ್ಲಿ, ಅಂಬರ್'ನ ಬಿಜೆಪಿ ಶಾಸಕ ಸತೀಶ್ ಪೂನಿಯಾ ವಿರುದ್ಧ ‘ಪೂನಿಯಾ ಭಗಾವ್-ಬಿಜೆಪಿ ಬಚಾವೋ’ (‘ಪೂನಿಯಾ ವಜಾ ಮಾಡಿ, ಬಿಜೆಪಿಯನ್ನು ಉಳಿಸಿ’) ಎಂದು ಹೇಳಲಾಗಿದ್ದು, ‘ಜೈ ಜೈ ರಾಜಸ್ಥಾನ್’ ಎಂಬ ಘೋಷಣೆ ಮುದ್ರಿಸಿರುವುದು ಕಂಡು ಬಂದಿದೆ.
ಅಷ್ಟೇ ಅಲ್ಲದೆ, ವಸುಂಧರಾ ರಾಜೇ ಅವರನ್ನು ರಾಜಸ್ಥಾನ ಬಿಜೆಪಿಯ ಮುಖ್ಯಸ್ಥೆ ಎಂದು ಘೋಷಿಸುವಂತೆ ಮತ್ತು ರಾಜ್ಯದಲ್ಲಿ ಅವರಿಗೆ ಮುಕ್ತ ಹಸ್ತವನ್ನು ನೀಡುವಂತೆ ಜಾಹೀರಾತಿನಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾಗೆ ಆಗ್ರಹಿಸಿರುವುದೂ ಕಂಡು ಬಂದಿದೆ.
ಅಜ್ಮೀರ್ ಕೋ-ಆಪರೇಟಿವ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಗಣೇಶ್ ಚೌಧರಿ ಎಂಬುವವರ ಹೆಸರಿನಲ್ಲಿ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಗೊಂಡಿದ್ದು, ಈ ಜಾಹೀರಾತು ರಾಜಸ್ಥಾನ ಬಿಜೆಪಿಯಲ್ಲಿ ಭುಗಿಲೆದ್ದಿರುವ ಅಸಮಾಧಾನವನ್ನು ಬಹಿರಂಗಪಡಿಸಿದೆ ಎಂದು ಹೇಳಳಾಗುತ್ತಿದೆ.
ಈ ನಡುವೆ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ವಸುಂದರಾ ರಾಜೇ ಅವರು, ಜಾಹೀರಾತು ಪ್ರಕಟಿಸಿದ ವ್ಯಕ್ತಿಗೂ ತಮಗೂ ಯಾವುದೇ ಸಂಪರ್ಕವಿಲ್ಲ ಎಂದು ತಿಳಿಸಿದ್ದಾರೆ.