ಬೀಜಿಂಗ್ ಹೇಳಿಕೆಗಳಿಗೆ ಆಧಾರವಿಲ್ಲ: ಲಡಾಖ್ ವಿಷಯವಾಗಿ ಹೊಸ ಆರೋಪಗ ತಿರಸ್ಕರಿಸಿ ಭಾರತದಿಂದ ಚೀನಾಗೆ ತಪರಾಕಿ

ಈಶಾನ್ಯ ಲಡಾಖ್ ನ ಸಂಘರ್ಷಕ್ಕೆ ಸಂಬಂಧಿಸಿದಂತೆ ಚೀನಾದ ಹೊಸ ಆರೋಪಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು ಬೀಜಿಂಗ್ ಹೇಳಿಕೆಗಳಿಗೆ ಆಧಾರವಿಲ್ಲ ಎಂದು ಹೇಳಿದೆ. 
ಸೇನಾ ಸರಕುಗಳನ್ನು ಹೊತ್ತೊಯ್ಯುತ್ತಿರುವ ವಾಹನ (ಸಂಗ್ರಹ ಚಿತ್ರ)
ಸೇನಾ ಸರಕುಗಳನ್ನು ಹೊತ್ತೊಯ್ಯುತ್ತಿರುವ ವಾಹನ (ಸಂಗ್ರಹ ಚಿತ್ರ)

ನವದೆಹಲಿ: ಈಶಾನ್ಯ ಲಡಾಖ್ ನ ಸಂಘರ್ಷಕ್ಕೆ ಸಂಬಂಧಿಸಿದಂತೆ ಚೀನಾದ ಹೊಸ ಆರೋಪಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು ಬೀಜಿಂಗ್ ಹೇಳಿಕೆಗಳಿಗೆ ಆಧಾರವಿಲ್ಲ ಎಂದು ಹೇಳಿದೆ. 

ಪ್ರಾಂತ್ಯದಲ್ಲಿ ಎಲ್ಎಸಿಯ ಯಥಾಸ್ಥಿತಿಯ ಬದಲಾವಣೆಗೆ ಚೀನಾದ ಏಕಪಕ್ಷೀಯ, ಪ್ರಚೋದನಾತ್ಮಕ ನಡೆಗಳಿಂದ ಶಾಂತಿ ಕದಡಿದೆ ಎಂದು ಭಾರತ ತಿರುಗೇಟು ನೀಡಿದೆ. 

ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗಚಿ ಈ ಬಗ್ಗೆ ಮಾತನಾಡಿದ್ದು ಗಡಿ ಪ್ರದೇಶದಲ್ಲಿ ಚೀನಾ ಬೃಹತ್ ಪ್ರಮಾಣದ ಸೇನಾ ತುಕಡಿಗಳನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ನಿಯೋಜನೆ ಮಾಡುವುದನ್ನು ಮುಂದುವರೆಸಿದೆ. ಚೀನಾದ ನಡೆಗಳಿಗೆ ಪ್ರತಿಕ್ರಿಯಾತ್ಮಕವಾಗಿ ಭಾರತ  ಸೇನಾ ಸಿಬ್ಬಂದಿಗಳನ್ನು ನಿಯೋಜನೆ ಮಾಡುತ್ತಿದೆ ಎಂದು ಹೇಳಿದ್ದಾರೆ. 

ಚೀನಾ ಭಾರತದ ವಿರುದ್ಧ ಮಾಡಿರುವ ಆರೋಪಗಳು ನಿರಾಧಾರವಾಗಿದ್ದು, ದ್ವಿಪಕ್ಷೀಯ ಒಪ್ಪಂದ ಹಾಗೂ ಶಿಷ್ಟಾಚಾರಕ್ಕೆ ಬದ್ಧವಾಗಿ ಉಳಿದ ವಿಷಯಗಳ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳುವತ್ತ ಚೀನಾ ಕೆಲಸ ಮಾಡಲಿದೆ ಎಂಬ ನಿರೀಕ್ಷೆ ಭಾರತಕ್ಕೆ ಇದೆ ಎಂದು ಅವರು ಹೇಳಿದ್ದಾರೆ. 

ಉಭಯ ರಾಷ್ಟ್ರಗಳ ನಡುವಿನ ಪ್ರಕ್ಷುಬ್ಧ ವಾತಾವರಣಕ್ಕೆ ಭಾರತದ ಫಾರ್ವರ್ಡ್ ಪಾಲಿಸಿ ಹಾಗೂ ಅಕ್ರಮವಾಗಿ ಚೀನಾದ ಪ್ರದೇಶವನ್ನು ಅತಿಕ್ರಮಣ ಮಾಡಿದ್ದೇ ಕಾರಣ ಎಂದು ಚೀನಾ ಆರೋಪಿಸಿತ್ತು ಈ ಹಿನ್ನೆಲೆಯಲ್ಲಿ ಭಾರತ ಪ್ರತಿಕ್ರಿಯೆ ನೀಡಿದೆ. 

ಚೀನಾದ ಆರೋಪಗಳ ಬಗ್ಗೆ ಮಾತನಾಡಿದ ಬಗಚಿ, "ಭಾರತ ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ ಹಾಗೂ ಕೆಲವು ದಿನಗಳ ಹಿಂದೆ ಇಂತಹ ಆಧಾರ ರಹಿತ ಹೇಳಿಕೆಗಳನ್ನು ತಿರಸ್ಕರಿಸಿದೆ" ಎಂದು ಹೇಳಿದ್ದಾರೆ. ಈಗ ಎಲ್ಎಸಿಯಲ್ಲಿ ಉಭಯ ರಾಷ್ಟ್ರಗಳು ತಲಾ 50,000-60,000 ಸೇನಾ ಟ್ರೂಪ್ ಗಳನ್ನು ಹೊಂದಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com