ಹಬ್ಬದ ಸಮಯದಲ್ಲಿ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆ ಹೆಚ್ಚಿಸಿ: ಸಿಐಎಲ್ ಗೆ ಕೇಂದ್ರ ಸೂಚನೆ
ದುರ್ಗಾ ಪೂಜೆಯ ಅವಧಿಯಲ್ಲಿ ಪ್ರತಿ ದಿನ 1.55-1.6 ಮಿಲಿಯನ್ ಟನ್‌ಗಳಷ್ಟು ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸಿ ಮತ್ತು ಅಕ್ಟೋಬರ್ 20 ರ ನಂತರ ಅದನ್ನು 1.7 ಮಿಲಿಯನ್ ಟನ್ ಗೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರ, ಸರ್ಕಾರಿ ಸ್ವಾಮ್ಯದ ಕೋಲ್...
Published: 12th October 2021 07:45 PM | Last Updated: 13th October 2021 01:19 PM | A+A A-

ಕಲ್ಲಿದ್ದಲು
ನವದೆಹಲಿ: ದುರ್ಗಾ ಪೂಜೆಯ ಅವಧಿಯಲ್ಲಿ ಪ್ರತಿ ದಿನ 1.55-1.6 ಮಿಲಿಯನ್ ಟನ್‌ಗಳಷ್ಟು ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸಿ ಮತ್ತು ಅಕ್ಟೋಬರ್ 20 ರ ನಂತರ ಅದನ್ನು 1.7 ಮಿಲಿಯನ್ ಟನ್ ಗೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರ, ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್(CIL)ಗೆ ಮಂಗಳವಾರ ಸೂಚಿಸಿದೆ.
ಹಬ್ಬದ ಸೀಸನ್ ಈಗಾಗಲೇ ಆರಂಭವಾಗಿರುವ ಸಮಯದಲ್ಲಿ ದೇಶದ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಎದುರಿಸುತ್ತಿದ್ದು, ಹಲವು ರಾಜ್ಯಗಳಲ್ಲಿ ಅನಿಯಮಿತ ಲೋಡ್ ಶೆಡಿಂಗ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಈ ಸೂಚನೆ ಮಹತ್ವ ಪಡೆದುಕೊಂಡಿದೆ.
"ನಿನ್ನೆ(ಸೋಮವಾರ) ದೆಹಲಿಯಲ್ಲಿ ಒಂದು ಸಭೆ ಇತ್ತು. ಈ ಸಭೆಯಲ್ಲಿ ಕೋಲ್ ಇಂಡಿಯಾಗೆ ಹಬ್ಬದ ಸಮಯದಲ್ಲಿ ವಿದ್ಯುತ್ ವಲಯಕ್ಕೆ ಪ್ರತಿದಿನ 1.55-1.6 ಮಿಲಿಯನ್ ಟನ್ ಕಲ್ಲಿದ್ದಲು ಪೂರೈಸುವಂತೆ ಸೂಚಿಸಲಾಯಿತು. ಅಕ್ಟೋಬರ್ 20 ರ ನಂತರ ದಿನಕ್ಕೆ 1.7 ಮೆಟ್ರಿಕ್ ಟನ್ ಪೂರೈಕೆ ಮಾಡಬೇಕಾಗುತ್ತದೆ" ಎಂದು ಉನ್ನತ ಮೂಲಗಳು ತಿಳಿಸಿವೆ.
ಸೋಮವಾರ ವಿದ್ಯುತ್ ವಲಯಕ್ಕೆ ಸಿಐಎಲ್ ನಿಂದ 1.615 ಮೆ.ಟನ್ ಕಲ್ಲಿದ್ದಲು ರವಾನೆ ಆಗಿದೆ. ದೇಶದಲ್ಲಿ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇಕಡಾ 69 ರಷ್ಟು ಕಲ್ಲಿದ್ದಲು ಆಧಾರಿತವಾಗಿದೆ. ಸಿಐಎಲ್ ಶೇಕಡಾ 80 ರಷ್ಟು ಕಲ್ಲಿದ್ದಲನ್ನು ವಿದ್ಯುತ್ ವಲಯಕ್ಕೆ ಪೂರೈಸುತ್ತದೆ.
ವಿದ್ಯುತ್ ಸ್ಥಾವರಗಳು ಉತ್ಪಾದನೆಗೆ ಅಗತ್ಯವಿರುವ ಕಲ್ಲಿದ್ದಲಿನ ಪ್ರಮಾಣವನ್ನು ಪಡೆಯುತ್ತಿವೆ. ಆದರೆ ಅವುಗಳು ಕಲ್ಲಿದ್ದಲು ಸಂಗ್ರಹ ಮಾಡುತ್ತಿಲ್ಲ. ನವೆಂಬರ್ 1 ರಿಂದ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಪ್ರಾರಂಭವಾಗುತ್ತದೆ ಎಂದು ಅವರು ಹೇಳಿದ್ದಾರೆ.