'ಪೊಲೀಸರು ನಮ್ಮ ಮೇಲೆ ನಿಗಾ ಇರಿಸಿದ್ದಾರೆ, ಚಲನವಲನ ಗಮನಿಸುತ್ತಿದ್ದಾರೆ': ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ದೂರು ಸಲ್ಲಿಕೆ
ಹೈಪ್ರೊಫೈಲ್ ಕ್ರೂಸ್ ಡ್ರಗ್ ಕೇಸಿನ ತನಿಖೆಯ ಉಸ್ತುವಾರಿ ವಹಿಸಿರುವ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ ವಲಯ ನಿರ್ದೇಶಕ ಸಮೀರ್ ವಾಂಖೆಡೆ, ಮುಂಬೈಯಲ್ಲಿ ಪೊಲೀಸರಿಗೆ ದೂರು ನೀಡಿ ಇಬ್ಬರು ಪೊಲೀಸರು ತಮ್ಮ ಚಲನವಲನಗಳ ಮೇಲೆ ನಿಗಾ ಇರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
Published: 12th October 2021 07:56 AM | Last Updated: 12th October 2021 01:10 PM | A+A A-

ಸಮೀರ್ ವಾಂಖೆಡೆ
ಮುಂಬೈ: ಹೈಪ್ರೊಫೈಲ್ ಕ್ರೂಸ್ ಡ್ರಗ್ ಕೇಸಿನ ತನಿಖೆಯ ಉಸ್ತುವಾರಿ ವಹಿಸಿರುವ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ ವಲಯ ನಿರ್ದೇಶಕ ಸಮೀರ್ ವಾಂಖೆಡೆ, ಮುಂಬೈಯಲ್ಲಿ ಪೊಲೀಸರಿಗೆ ದೂರು ನೀಡಿ ಇಬ್ಬರು ಪೊಲೀಸರು ತಮ್ಮ ಚಲನವಲನಗಳ ಮೇಲೆ ನಿಗಾ ಇರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
2015ರಲ್ಲಿ ತಮ್ಮ ತಾಯಿಯ ನಿಧನ ನಂತರ ದಹನ ಮಾಡಿದ್ದ ಮುಂಬೈಯ ಉಪ ನಗರದ ಒಶಿವರ ಸ್ಮಸಾನಕ್ಕೆ ನಿಯಮಿತವಾಗಿ ವಾಂಖೆಡೆ ಬಂದು ಹೋಗುತ್ತಿರುತ್ತಾರೆ. ಒಶಿವರ ಪೊಲೀಸ್ ಠಾಣೆಯ ಇಬ್ಬರು ಅಧಿಕಾರಿಗಳು ಸ್ಮಶಾನ ಬಳಿ ಹೋಗಿ ವಾಂಖೆಡೆಯವರ ಚಲನವಲನಗಳನ್ನು ತಿಳಿಯಲು ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಮ್ಮ ಮೇಲೆ ಅಕ್ರಮವಾಗಿ ಪೊಲೀಸರು ಕಣ್ಗಾವಲು ಇರಿಸಿದ್ದಾರೆ ಎಂದು ಸಮೀರ್ ವಾಂಖೆಡೆಯವರು ಮಹಾರಾಷ್ಟ್ರದ ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ತಮ್ಮ ಚಲನವಲನಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ದೂರು ನೀಡಿರುವ ಸಮೀರ್ ವಾಂಖೆಡೆಯವರು ತಮ್ಮ ದೂರಿಗೆ ಪೂರಕವಾಗಿ ಪುಷ್ಠೀಕರಿಸಲು ಒಶಿವರ ಸ್ಮಶಾನದ ಸಿಸಿಟಿವಿ ದೃಶ್ಯಾವಳಿಗಳನ್ನು ಸಲ್ಲಿಸಿದ್ದಾರೆ.
ಕಳೆದ ಅಕ್ಟೋಬರ್ 2ರಂದು ತಡರಾತ್ರಿ ಮುಂಬೈಯ ಕ್ರೂಸ್ ಹಡಗಿನ ಮೇಲೆ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿ ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದು ಮಾತ್ರವಲ್ಲದೆ ಕಳೆದ ವರ್ಷ ಜೂನ್ ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಕೇಳಿಬಂದ ಬಾಲಿವುಡ್ ಡ್ರಗ್ ಕೇಸು ಹಾಗೂ ಇತರ ಹೈಪ್ರೊಫೈಲ್ ಡ್ರಗ್ ಕೇಸುಗಳ ವಿಚಾರಣೆಗಳನ್ನು ಸಹ ನಡೆಸಿದ್ದರು.