ಅಪಹರಣ, ಹಲ್ಲೆ ಪ್ರಕರಣ: ಮಹಾರಾಷ್ಟ್ರ ಸಚಿವರಿಗೆ ಜಾಮೀನು
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಅಪಹರಿಸಿ, ತನ್ನ ಬಂಗಲೆಯಲ್ಲಿಟ್ಟು ಹಲ್ಲೆ ಮಾಡಿದ ಆರೋಪದಲ್ಲಿ ಮಹಾರಾಷ್ಟ್ರ ಸಚಿವರೊಬ್ಬರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಸಚಿವರಿಗೆ ಜಾಮೀನು ದೊರೆತಿದೆ.
Published: 15th October 2021 08:42 AM | Last Updated: 15th October 2021 08:42 AM | A+A A-

ಜಿತೇಂದ್ರ ಅವ್ಹದ್
ಥಾಣೆ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಅಪಹರಿಸಿ, ತನ್ನ ಬಂಗಲೆಯಲ್ಲಿಟ್ಟು ಹಲ್ಲೆ ಮಾಡಿದ ಆರೋಪದಲ್ಲಿ ಮಹಾರಾಷ್ಟ್ರ ಸಚಿವರೊಬ್ಬರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಸಚಿವರಿಗೆ ಜಾಮೀನು ದೊರೆತಿದೆ.
ಮಹಾರಾಷ್ಟ್ರ ವಸತಿ ಸಚಿವ, ಎನ್ಸಿಪಿ ನಾಯಕ ಜಿತೇಂದ್ರ ಅವ್ಹದ್ ಅವರನ್ನು ವರ್ತಕ್ ನಗರ್ ಪೊಲೀಸರು ಗುರುವಾರ ಬಂಧಿಸಿದ್ದರು. ನಂತರ ಅವರ ಹೇಳಿಕೆಯನ್ನು ದಾಖಲಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಆ ನಂತರದಲ್ಲಿ 10 ಸಾವಿರ ರೂಪಾಯಿ ಬಾಂಡ್ ಮತ್ತು ಓರ್ವ ವ್ಯಕ್ತಿಯ ಶ್ಯೂರಿಟಿಯೊಂದಿಗೆ ಜಾಮೀನು ಪಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಆನಂದ್ ಕರ್ಮುಸೆ ಎಂಬವರು ಸಚಿವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ತನ್ನನ್ನು ಅಪಹರಿಸಿ ಅವ್ಹದ್ ಅವರ ಬಂಗಲೆಯಲ್ಲಿ ಅವರ ಮುಂದೆಯೇ ಥಳಿಸಲಾಗಿದೆ ಎಂದು ಆರೋಪಿಸಿದ್ದರು. ನಂತರ ಬಾಂಬೆ ಹೈಕೋರ್ಟ್ ಈ ಪ್ರಕರಣದ ಕುರಿತು ಸರಿಯಾದ ತನಿಖೆ ನಡೆಸುವಂತೆ ಥಾಣೆ ಪೊಲೀಸರಿಗೆ ನಿರ್ದೇಶನ ನೀಡಿತ್ತು.
ಏಪ್ರಿಲ್ 5, 2020ರ ಸಂಜೆ ಕೆಲವು ಪೊಲೀಸ್ ಸಿಬ್ಬಂದಿ ನನ್ನ ಬಳಿ ಬಂದು ಠಾಣೆಗೆ ಬರಬೇಕೆಂದು ಸೂಚನೆ ನೀಡಿದ್ದರು. ಅವರ ಜೊತೆ ತೆರಳಿದಾಗ ಪೊಲೀಸ್ ಠಾಣೆಗೆ ಕರೆದೊಯ್ಯದೇ ಜಿತೇಂದ್ರ ಅವ್ಹದ್ ಬಂಗಲೆಗೆ ಕರೆದೊಯ್ದರು. ಈ ವೇಳೆ 10ರಿಂದ 15 ಮಂದಿ ಅವ್ಹದ್ ಅವರ ಎದುರಲ್ಲೇ ನನ್ನನ್ನು ಥಳಿಸಿದ್ದರು. ಅವ್ಹದ್ ಅವರ ತಿರುಚಲಾದ ಭಾವಚಿತ್ರವನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿದ ಆರೋಪದಲ್ಲಿ ನನ್ನನ್ನು ಥಳಿಸಲಾಗಿದೆ ಎಂದು ಸಿವಿಲ್ ಇಂಜಿನಿಯರ್ ಆಗಿರುವ ಕರ್ಮುಸೆ ದೂರು ನೀಡಿದ್ದರು.
ಈ ಆರೋಪಗಳನ್ನು ಜಿತೇಂದ್ರ ಅವ್ಹದ್ ನಿರಾಕರಿಸಿದ್ದರು. ಆದರೆ ವರ್ತಕ್ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಯಿತು. ಐಪಿಸಿ ಸೆಕ್ಷನ್ 324, 365, 506ರ ಅಡಿಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿತ್ತು.
ಈಗ ಜಿತೇಂದ್ರ ಅವ್ಹದ್ ಅವರು ಇದೇ ದೂರಿನ ಅನ್ವಯ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಜಾಮೀನು ಪಡೆದಿದ್ದಾರೆ. ಬಿಜೆಪಿ ನಾಯಕ ಮತ್ತು ಮಾಜಿ ಸಂಸದ ಕಿರಿಟ್ ಸೊಮೈಯಾ ಅವರು ಅವ್ಹದ್ ಅವರನ್ನು ಕ್ಯಾಬಿನೆಟ್ನಿಂದ ಕೈಬಿಡಲು ಒತ್ತಾಯಿಸಿದ್ದಾರೆ.