ಶಾಂಘೈ ಸಹಕಾರ ಸಂಸ್ಥೆ ವೆಬಿನಾರ್: ಇಂದಿರಾಗಾಂಧಿ ಅವರನ್ನು ಹೊಗಳಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಶಾಂಘೈ ಸಹಕಾರ ಸಂಸ್ಥೆ ವೆಬಿನಾರ್ ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಹೊಗಳಿದ್ದಾರೆ.
Published: 15th October 2021 01:40 PM | Last Updated: 15th October 2021 01:40 PM | A+A A-

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್
ನವದೆಹಲಿ: ಶಾಂಘೈ ಸಹಕಾರ ಸಂಸ್ಥೆ ವೆಬಿನಾರ್ ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಹೊಗಳಿದ್ದಾರೆ.
ಶಾಂಘೈ ಸಹಕಾರ ಸಂಸ್ಥೆಯ ಸೆಮಿನಾರ್ನಲ್ಲಿ ಇಂದು ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಹೊಗಳಿದ್ದಾರೆ. ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಕುರಿತು ಮಾತನಾಡಿದ ರಾಜನಾಥ್ ಸಿಂಗ್, ನಮ್ಮ ದೇಶದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಹಲವು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದರು. ಅಲ್ಲದೆ, ಇಂಡೋ-ಪಾಕ್ ಯುದ್ಧದ ಸಮಯದಲ್ಲೂ ಗಟ್ಟಿಯಾಗಿ ನಿರ್ಧಾರವನ್ನು ಕೈಗೊಂಡು, ಆ ಕಠಿಣ ಸಮಯವನ್ನೂ ಸಮರ್ಥವಾಗಿ ಎದುರಿಸಿದರು. ಅಷ್ಟೇ ಅಲ್ಲ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಬಗ್ಗೆಯೂ ಮಾತನಾಡಿದ ರಾಜನಾಥ್ ಸಿಂಗ್, ರಾಷ್ಟ್ರೀಯ ಅಭಿವೃದ್ಧಿಗಾಗಿ ಮಹಿಳಾಶಕ್ತಿಯನ್ನು ಸಕಾರಾತ್ಮಕ ಬಳಸಿಕೊಳ್ಳುವಲ್ಲಿ ಭಾರತ ಅಪಾರ ಅನುಭವ ಹೊಂದಿದೆ ಎಂದು ಹೇಳಿದರು.
Speaking at the SCO-International Webinar on ‘Role of Women in the Armed Forces’. https://t.co/hz6kAxM5wQ
— Rajnath Singh (@rajnathsingh) October 14, 2021
'ಭಾರತದ ಪ್ರಾಚೀನ ಸಾಹಿತ್ಯವು ಸ್ತ್ರೀವಾದದ ಪರವಾದ ವಾದಗಳಿಂದ ಕೂಡಿದೆ. ಸ್ತ್ರೀವಾದದ ಪರವಾಗಿ ವಾದಿಸುವ ಅಗತ್ಯವಿದ್ದಲ್ಲಿ ನಮ್ಮ ಪ್ರಾಚೀನ ಸಾಹಿತ್ಯವು ಇದಕ್ಕೆ ಪುಷ್ಟಿಯನ್ನು ನೀಡುತ್ತದೆ. ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಹಲವಾರು ಉದಾಹರಣೆಗಳಿದ್ದು, ಸರಸ್ವತಿ ನಮ್ಮ ಜ್ಞಾನದ ದೇವತೆ, ದುರ್ಗಾ -ರಕ್ಷಣೆ, ಶಕ್ತಿ ಮತ್ತು ಯುದ್ಧಕ್ಕೆ ಸಂಬಂಧಿಸಿದವಳಾಗಿದ್ದಾಳೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಮಹಿಳೆಯರಿಗೆ ಅವಕಾಶ ನೀಡಲಾಗುವುದು. ಅಲ್ಲದೇ ಪಡೆಗಳಲ್ಲಿ ಲಿಂಗ ಸಮಾನತೆಯನ್ನು ಕಾಯ್ದುಕೊಳ್ಳಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಅಂತೆಯೇ ಪಾಕ್ ವಿರುದ್ಧ ಕಿಡಿಕಾರಿದ ರಾಜನಾಥ್ ಸಿಂಗ್, ಭಯೋತ್ಪಾದನೆಯನ್ನು ಒಂದು ಅಸ್ತ್ರವಾಗಿ 'ನಾನ್ -ಸ್ಟೇಟ್ ಆ್ಯಕ್ಟರ್ಸ್ ಮತ್ತು ಬೇಜವಾಬ್ದಾರಿ ರಾಜ್ಯಗಳು' ಮಾತ್ರ ಬಳಸಿಕೊಳ್ಳುತ್ತಿವೆ. ಎಸ್‌ಸಿಒ ಭಯೋತ್ಪಾದನೆಯನ್ನು ವಿರೋಧಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಭದ್ರತೆ ಮತ್ತು ಯುದ್ಧದ ಸ್ವರೂಪವು ಬದಲಾಗುತ್ತಿರುವುದರಿಂದ ಇದು ನಮ್ಮ ಸಮಾಜ, ಗಡಿಯಲ್ಲಿ ಆತಂಕವನ್ನು ಸೃಷ್ಟಿ ಮಾಡುತ್ತಿದೆ. ರಾಜಕಾರಣಿಗಳು ಮತ್ತು ಬೇಜವಾಬ್ದಾರಿಯುತ ದೇಶಗಳು ತಮ್ಮ ರಾಜಕೀಯ ಉದ್ದೇಶಗಳನ್ನು ಸಾಧಿಸಿಕೊಳ್ಳಲು ಇದನ್ನು ಬಳಸಿಕೊಳ್ಳುತ್ತಿವೆ ಎಂದು ಸಿಂಗ್ ಹೇಳಿದರು.
ಒಂದು ಸಂಘಟನೆಯಾಗಿ ಎಸ್‌ಸಿಒ ಭಯೋತ್ಪಾದನೆಯನ್ನು ಮತ್ತು ಅದರ ಎಲ್ಲಾ ಚಟುವಟಿಕೆಗಳನ್ನು ವಿರೋಧಿಸುತ್ತದೆ. ಇದು ಪ್ರಸ್ತುತ ಎಂಟು ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಭಯೋತ್ಪಾದನೆಯ ಮೂಲಕ ಭಾರತದೊಂದಿಗೆ ಪಾಕಿಸ್ತಾನವು "ಪ್ರಾಕ್ಸಿ ಯುದ್ಧ" ನಡೆಸುತ್ತಿದೆ. ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಎಸ್‌ಸಿಒ ದೇಶಗಳ ಎಲ್ಲ ನಾಗರಿಕರು ಭಾಗವಹಿಸುವ ಅಗತ್ಯವಿದೆ ಎಂದು ಹೇಳಿದರು.