ಸಿಂಘು ಗಡಿಯಲ್ಲಿ ಹತ್ಯೆ: ಮೂವರು ಆರೋಪಿಗಳು ಆರು ದಿನ ಪೊಲೀಸ್ ಕಸ್ಟಡಿಗೆ , 2 ಎಸ್ ಐಟಿಗಳಿಂದ ತನಿಖೆ
ಸಿಂಘು ಗಡಿ ಬಳಿಯ ರೈತರ ಪ್ರತಿಭಟನೆ ಸ್ಥಳದಲ್ಲಿ ನಡೆದ ಕಾರ್ಮಿಕರೊಬ್ಬರ ಬರ್ಬರ ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದ್ದು, ಘಟನೆ ಬಗ್ಗೆ ತನಿಖೆಗಾಗಿ ಎರಡು ವಿಶೇಷ ತಂಡಗಳನ್ನು ಹರಿಯಾಣ ಪೊಲೀಸರು ರಚಿಸಿದ್ದಾರೆ.
Published: 17th October 2021 06:27 PM | Last Updated: 17th October 2021 06:27 PM | A+A A-

ಸಿಂಘು ಗಡಿಯಲ್ಲಿರುವ ನಿಹಾಂಗ್ ಸದಸ್ಯರೊಬ್ಬರ ಸಾಂದರ್ಭಿಕ ಚಿತ್ರ
ಚಂಢೀಘಡ: ಸಿಂಘು ಗಡಿ ಬಳಿಯ ರೈತರ ಪ್ರತಿಭಟನೆ ಸ್ಥಳದಲ್ಲಿ ನಡೆದ ಕಾರ್ಮಿಕರೊಬ್ಬರ ಬರ್ಬರ ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದ್ದು, ಘಟನೆ ಬಗ್ಗೆ ತನಿಖೆಗಾಗಿ ಎರಡು ವಿಶೇಷ ತಂಡಗಳನ್ನು ಹರಿಯಾಣ ಪೊಲೀಸರು ರಚಿಸಿದ್ದಾರೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಖ್ಖರ ನಿಹಾಂಗ್ ಸಮುದಾಯದ ಪ್ರಮುಖ ಸದಸ್ಯ ನರೈನ್ ಸಿಂಗ್ ನನ್ನು ಶನಿವಾರ ಅಮೃತಸರದ ಬಳಿ ಬಂಧಿಸಲಾಗಿತ್ತು. ಮತ್ತಿಬ್ಬರು ಆರೋಪಿಗಳಾದ ಗೋವಿಂದ್ ಪ್ರೀತ್ ಸಿಂಗ್ ಮತ್ತು ಭಗವತ್ ಸಿಂಗ್ ಸೋನಿಪಟ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದರು. ಅವರನ್ನು ಇಂದು ಸೊನಿಪಟ್ ನ್ಯಾಯಾಲಯವೊಂದರ ಬಳಿ ಹಾಜರುಪಡಿಸಲಾಯಿತು. ನ್ಯಾಯಾಲಯ ಆರೋಪಿಗಳನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತು.
ಘಟನೆ ನಡೆದಾಗ ಆರೋಪಿಗಳು ಧರಿಸಿದ ಬಟ್ಟೆಗಳನ್ನು ವಶ ಪಡಿಸಿಕೊಂಡಿದ್ದು, ಘಟನೆ ಬಗ್ಗೆ ಆಳವಾಗಿ ತಿಳಿಯಲು ಹಾಗೂ ಅಪರಾಧದ ಮರುಸೃಷ್ಟಿಗಾಗಿ ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಲಯದ ಬಳಿ ಮನವಿ ಮಾಡಿದರು.
ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೋಗಳು ಹಾಗೂ ಇಡೀ ಘಟನೆ ಕುರಿತಂತೆ ಎಸ್ ಐಟಿ ತಂಡಗಳು ತನಿಖೆ ನಡೆಸಲಿವೆ. ಘಟನೆ ಕುರಿತಂತೆ ಉನ್ನತ ಮಟ್ಟದ ತನಿಖೆಗೆ ಮೃತರ ಕುಟುಂಬ ಸದಸ್ಯರು ಒತ್ತಾಯಿಸಿದ್ದರು.