ಲಾಲೂ ಪ್ರಸಾದ್ ಯಾದವ್ ನನ್ನನ್ನು ಶೂಟ್ ಮಾಡಬಹುದು, ಬೇರೇನೂ ಆಗದು: ನಿತೀಶ್ ಕುಮಾರ್

ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಎನ್‌ಡಿಎ ಸರ್ಕಾರದ ವಿಸರ್ಜನೆಗೆ ತಾವು ತಯಾರಿ ನಡೆಸಿರುವುದಾಗಿ ಹೇಳಿರುವ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್‌ಗೆ ನಿತೀಶ್ ತಿರುಗೇಟು ನೀಡಿದ್ದಾರೆ. 
ನಿತೀಶ್ ಕುಮಾರ್
ನಿತೀಶ್ ಕುಮಾರ್

ಪಾಟ್ನಾ: ಲಾಲೂ ಪ್ರಸಾದ್ ಯಾದವ್ ನನ್ನನ್ನು ಶೂಟ್ ಮಾಡಬಹುದು ಬೇರೇನೂ ಆಗದು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. 

ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಎನ್‌ಡಿಎ ಸರ್ಕಾರದ ವಿಸರ್ಜನೆಗೆ ತಾವು ತಯಾರಿ ನಡೆಸಿರುವುದಾಗಿ ಹೇಳಿರುವ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್‌ಗೆ ನಿತೀಶ್ ತಿರುಗೇಟು ನೀಡಿದ್ದಾರೆ. 

ತಾರಾಪುರ ಮತ್ತು ಕುಶೇಶ್ವರ ಆಸ್ಥಾನ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಕಾರಣ ಆಡಳಿತಾರೂಢ ಜೆಡಿಯು ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರ ತಾರಕಕ್ಕೇರಿದೆ. ಲಾಲೂ ಪ್ರಸಾದ್ ಯಾದವ್ ಅವರು ಮೂರು ವರ್ಷಗಳ ಬಳಿಕ ಇತ್ತೀಚೆಗೆ ಪಾಟ್ನಾಗೆ ಆಗಮಿಸಿದ್ದು, ಉಪಚುನಾವಣೆ ಪ್ರಚಾರ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ಹೇಳಿದ್ದರು.

ಉಪಚುನಾವಣೆಗಳಲ್ಲಿ ನಿತೀಶ್‌ರನ್ನು ವಿಸರ್ಜನೆ ಮಾಡಲಿದ್ದೇವೆ ಎಂದು ಲಾಲೂ ಹೇಳಿದ್ದರು. ಇದರ ಹಿನ್ನೆಲೆಯಲ್ಲೇ ನಿತೀಶ್ ಹಾಗೂ ಲಾಲೂ ಮಾತಿನ ಚಕಮಕಿ ಆರಂಭಗೊಂಡಿದೆ. ನನ್ನನ್ನು ವಿಸರ್ಜನೆ ಮಾಡುವ ಕುರಿತು ಲಾಲೂ ಪ್ರಸಾದ್ ಯಾದವ್ ಹೇಳಿಕೆ ನೀಡಿದ್ದಾರೆ. ಅವರು ನನ್ನ ಮೇಲೆ ಗುಂಡು ಹಾರಿಸಬಹುದು. ಇದನ್ನೊಂದು ಬಿಟ್ಟು ಅವರು ಇನ್ನೇನು ತಾನೇ ಮಾಡಲು ಸಾಧ್ಯ ಎಂದು ನಿತೀಶ್ ಕುಮಾರ್ ಪ್ರಶ್ನಿಸಿದ್ದಾರೆ.

ಲಾಲೂ ಬೇಕಾದರೆ ನನ್ನ ಮೇಲೆ ಗುಂಡಿನ ದಾಳಿ ನಡೆಸಬಹುದು. ಏಕೆಂದರೆ ಅವರು ಇದನ್ನೊಂದನ್ನು ಬಿಟ್ಟು ಬೇರೆ ಏನನ್ನೂ ಮಾಡಲಾರರು ಎಂದು ನಿತೀಶ್ ಕುಮಾರ್ ಪತ್ರಕರ್ತರ ಪ್ರಶ್ನೆಗೆ ಹಾಸ್ಯಭರಿತವಾಗಿ ಉತ್ತರ ನೀಡಿದರು. ಅಲ್ಲದೇ ಕಾಂಗ್ರೆಸ್ ಬಗ್ಗೆಯೂ ಮಾತನಾಡಿದ್ದ ಲಾಲೂ, ಕಾಂಗ್ರೆಸ್ ಈ ದೇಶದ ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷ. ರಾಜ್ಯ ಮತ್ತು ದೇಶದ ಒಳಿತಿಗಾಗಿ ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ಹೇಳಿದ್ದರು. ಲಾಲು ಪ್ರಸಾದ್ ಯಾದವ್ ಬಿಹಾರದಲ್ಲಿ ಎನ್‌ಡಿಎ ಆಡಳಿತ ಕೊನೆಗಾಣಿಸುವ ಹಗಲುಗನಸು ಕಾಣುತ್ತಿದ್ದಾರೆ. 

ಆದರೆ ರಾಜ್ಯದ ಜನತೆ ಯಾರನ್ನು ಮನೆಯಲ್ಲಿ ಕೂರಿಸಬೇಕು ಎಂದು ಕಳೆದ ವಿಧಾನಸಭಾ ಚುನಾವಣೆಯಲ್ಲೇ ನಿರ್ಧರಿಸಿಯಾಗಿದೆ. ಲಾಲೂ ಅವರಿಗೆ ಇನ್ನೂ ಸತ್ಯದ ಅರಿವಾಗಿಲ್ಲ ಎಂದರೆ ಅದಕ್ಕೆ ನಾನು ಹೊಣೆಯಲ್ಲ ಎಂದು ನಿತೀಶ್ ಕುಮಾರ್ ವ್ಯಂಗ್ಯವಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com