ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್‌ಗೆ ಭದ್ರತೆ ಸಹಿ ಹಾಕಿದ ಬಾಲಿವುಡ್ ನಟಿ ಜೂಹಿ ಜಾವ್ಲಾ
ವಿಲಾಸಿ ಹಡಗಿನಲ್ಲಿ ಮಾದಕ ವಸ್ತು ಪತ್ತೆ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತನಾಗಿ ನಿನ್ನೆಯಷ್ಟೇ ಜಾಮೀನು ಪಡೆದಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರಿಗೆ ಭದ್ರತೆಯ ಸಹಿಯನ್ನು ನಟಿ ಜೂಹಿ ಚಾವ್ಲಾ ಹಾಕಿದ್ದಾರೆ.
Published: 29th October 2021 08:20 PM | Last Updated: 29th October 2021 08:53 PM | A+A A-

ಆರ್ಯನ್ ಖಾನ್-ಶಾರೂಕ್-ಜೂಹಿ ಚಾವ್ಲ
ಬೆಂಗಳೂರು: ವಿಲಾಸಿ ಹಡಗಿನಲ್ಲಿ ಮಾದಕ ವಸ್ತು ಪತ್ತೆ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತನಾಗಿ ನಿನ್ನೆಯಷ್ಟೇ ಜಾಮೀನು ಪಡೆದಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರಿಗೆ ಭದ್ರತೆಯ ಸಹಿಯನ್ನು ನಟಿ ಜೂಹಿ ಚಾವ್ಲಾ ಹಾಕಿದ್ದಾರೆ.
ಸೆಷನ್ಸ್ ನ್ಯಾಯಾಲಯವು ಜೂಹಿ ಚಾವ್ಲಾ ಅವರ ಭದ್ರತೆಯನ್ನು ಒಪ್ಪಿಕೊಂಡಿದೆ ಎಂದು ಆರ್ಯನ್ ಖಾನ್ ವಕೀಲ ಸತೀಶ್ ಮಾನೆಶಿಂಧೆ ಹೇಳಿದ್ದಾರೆ.
ಜಾಮೀನು ಔಪಚಾರಿಕತೆಗಳನ್ನು ಪೂರ್ಣಗೊಳಿಸಲಾಗಿದೆ. ಜೂಹಿ ಚಾವ್ಲಾ ಅವರು ನೀಡಿರುವ ಭದ್ರತೆಯನ್ನು ನ್ಯಾಯಾಲಯವು ಒಪ್ಪಿಕೊಂಡಿದೆ. ಆರ್ಯನ್ ಅವರನ್ನು ಚಾವ್ಲಾ ಬಾಲ್ಯದಿಂದಲೂ ನೋಡಿದ್ದಾರೆ” ಎಂದು ಮಾನೆಶಿಂಧೆ ಹೇಳಿದರು.
₹1 ಲಕ್ಷ ವೈಯಕ್ತಿಕ ಬಾಂಡ್ ಮತ್ತು ಒಂದು ಅಥವಾ ಹೆಚ್ಚು ಭದ್ರತೆ ಹೊದಗಿಸಬೇಕು. ಗ್ರೇಟರ್ ಮುಂಬೈನಲ್ಲಿರುವ ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆ ವಿಶೇಷ ನ್ಯಾಯಾಧೀಶರ ಅನುಮತಿ ಪಡೆಯದೇ ದೇಶ ತೊರೆಯುವಂತಿಲ್ಲ. ತನಿಖಾಧಿಕಾರಿಗೆ ಮಾಹಿತಿ ನೀಡದೇ, ತಾನು ಭೇಟಿ ನೀಡುವ ಪ್ರದೇಶದ ಮಾಹಿತಿ ನೀಡದೆ ಪ್ರವಾಸ ಕೈಗೊಳ್ಳುವಂತಿಲ್ಲ. ಸಾಕ್ಷ್ಯಗಳ ಮೇಲೆ ಪ್ರಭಾವ ಅಥವಾ ಸಾಕ್ಷ್ಯವನ್ನು ತಿರುಚುವಂತಿಲ್ಲ. ವಿಶೇಷ ನ್ಯಾಯಾಲಯಕ್ಕೆ ಪಾಸ್‌ಪೋರ್ಟ್ ಸಲ್ಲಿಸಬೇಕು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವಂತಿಲ್ಲ. ಮಾದಕವಸ್ತು ನಿಯಂತ್ರಣ ಸಂಸ್ಥೆಯ ಕಚೇರಿಗೆ ಪ್ರತಿ ಶುಕ್ರವಾರ ಬೆಳಿಗ್ಗೆ 11 ಮತ್ತು ಮಧ್ಯಾಹ್ನ 2ಕ್ಕೆ ಭೇಟಿ ನೀಡಬೇಕು. ವಿಚಾರಣೆಯ ದಿನದಂದು ನ್ಯಾಯಾಲಯದಲ್ಲಿ ಹಾಜರಿರಬೇಕು. ಎನ್‌ಸಿಬಿ ಅಧಿಕಾರಿಗಳು ವಿಚಾರಣೆಗೆ ಆಹ್ವಾನಿಸಿದಾಗ ಅವರ ಮುಂದೆ ಹಾಜರಾಗಬೇಕು ಎಂಬುದು ಸೇರಿದಂತೆ ಹದಿಮೂರು ಷರತ್ತುಗಳನ್ನು ಆರ್ಯನ್ ಖಾನ್, ಇತರೆ ಇಬ್ಬರು ಆರೋಪಿಗಳಾದ ಅರ್ಬಾಜ್ ಮರ್ಚೆಂಟ್ ಮತ್ತು ಮೂನ್‌ಮೂನ್ ಧಮೇಚಾಗೆ ನ್ಯಾ. ನಿತಿನ್ ಸಾಂಬ್ರೆ ವಿಧಿಸಿದ್ದಾರೆ.
ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನು ರದ್ದುಪಡಿಸುವಂತೆ ಕೋರಿ ಎನ್‌ಸಿಬಿ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಬಹುದು ಎಂಬುದನ್ನು ಪೀಠವು ಸ್ಪಷ್ಟಪಡಿಸಿದೆ.