ಧಾರ್ಮಿಕ ಸಂಸ್ಥೆಗಳಿಗೆ ಹಣ ನೀಡುವುದು ಜಾತ್ಯತೀತತೆಯೇ?: ಉತ್ತರ ಪ್ರದೇಶ ಸರ್ಕಾರಕ್ಕೆ ಹೈಕೋರ್ಟ್

ಮದರಸಾಗಳಂತಹ, ಸರ್ಕಾರದ ಮಾನ್ಯತೆ ಪಡೆದ ಅನುದಾನಿತ ಧಾರ್ಮಿಕ ಸಂಸ್ಥೆಗಳಿಗೆ ಹಣ ನೀಡುತ್ತಿರುವುದರ ಬಗ್ಗೆ ಅಲ್ಲಾಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶದ ಸರ್ಕಾರದಿಂದ ವಿವರಣೆ ಕೇಳಿದೆ.
ಅಲಹಾಬಾದ್ ಹೈಕೋರ್ಟ್
ಅಲಹಾಬಾದ್ ಹೈಕೋರ್ಟ್

ಪ್ರಯಗ್ರಾಜ್​: ಮದರಸಾಗಳಂತಹ, ಸರ್ಕಾರದ ಮಾನ್ಯತೆ ಪಡೆದ ಅನುದಾನಿತ ಧಾರ್ಮಿಕ ಸಂಸ್ಥೆಗಳಿಗೆ ಹಣ ನೀಡುತ್ತಿರುವುದರ ಬಗ್ಗೆ ಅಲ್ಲಾಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶದ ಸರ್ಕಾರದಿಂದ ವಿವರಣೆ ಕೇಳಿದೆ.

ಧಾರ್ಮಿಕ ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ನೀಡುವ ನೀತಿ ಸಂವಿಧಾನದ ಜಾತ್ಯತೀತ ಯೋಜನೆಯ ಜೊತೆ ಸ್ಥಿರವಾಗಿ ನಡೆದುಕೊಂಡು ಬಂದಿದೆಯೇ? ಎಂದು ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ.

ಮದರಸಾ ಅಂಜುಮಾನ್ ಇಸ್ಲಾಮಿಯಾ ಫೈಜುಲ್ ಉಲೂಮ್ ಹಾಗೂ ಮತ್ತೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅಜಯ್ ಭನೋಟ್ ಅವರಿದ್ದ ಪೀಠ, ನಾಲ್ಕು ವಾರಗಳಲ್ಲಿ ಸರ್ಕಾರ ಈ ಸಂಬಂಧ ಪ್ರಮಾಣಪತ್ರ ಸಲ್ಲಿಸಬೇಕು ಎಂಬ ಸೂಚನೆ ನೀಡಿದ್ದು ಅ.06ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.

ಮದರಸಾ ಹಾಗೂ ಇನ್ನಿತರ ಧಾರ್ಮಿಕ ಸಂಸ್ಥೆಗಳಲ್ಲಿನ ಪಠ್ಯಕ್ರಮ, ಆಟದ ಮೈದಾನ, ಗುರುತಿಸುವಿಕೆಯ ನಿಯಮಗಳು ಮತ್ತು ಮಾನದಂಡಗಳ ದಾಖಲೆಗಳನ್ನು ತರುವುದಕ್ಕೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಇದೇ ವೇಳೆ ಮದರಸಾಗಳಿಗೂ ಮಾನ್ಯತೆ ನೀಡಿ ಅನುದಾನ ನೀಡಲಾಗುತ್ತಿದೆಯೇ? ಹಾಗೂ ವಿದ್ಯಾರ್ಥಿನಿಯರಿಗೂ ಪ್ರವೇಶ ಇದೆಯೇ? ಎಂದು ಕೋರ್ಟ್ ಪ್ರಶ್ನಿಸಿದೆ.

ರಾಜ್ಯ ಸರ್ಕಾರ ತನ್ನ ಪ್ರಮಾಣಪತ್ರದಲ್ಲಿ ಶಿಕ್ಷಣದ ಇತರ ಬೋರ್ಡ್ ಗಳು ಇತರ ಧಾರ್ಮಿಕ ಶಿಕ್ಷಣವನ್ನು ನೀಡುವ,  ಧಾರ್ಮಿಕ ಪಂಥಗಳ ಸಂಸ್ಥೆಗಳ ವಿವರಗಳನ್ನೂ ನೀಡಬೇಕಾಗಿದೆ.

ಇದೇ ವೇಳೆ ಬೇರೆ ಧಾರ್ಮಿಕ ಅಲ್ಪಸಂಖ್ಯಾತರಿಗೂ ಧಾರ್ಮಿಕ ಶಿಕ್ಷಣವನ್ನು ನೀಡುವುದಕ್ಕೆ ಸರ್ಕಾರದ ಅನುದಾನ ಲಭಿಸುತ್ತಿದೆಯೇ? ಧಾರ್ಮಿಕ ಶಿಕ್ಷಣಗಳಿರುವ ಸಂಸ್ಥೆಗಳಲ್ಲಿ ಮಹಿಳೆಯರಿಗೂ ಕಲಿಯಲು ಅವಕಾಶವಿದೆಯೇ? ಒಂದು ವೇಳೆ ಇಲ್ಲದೇ ಇದ್ದಲ್ಲಿ ಅದು ಸಂವಿಧಾನ ನಿಷೇಧಿಸಲಾಗಿರುವ ತಾರತಮ್ಯವಾಗಿದೆಯೇ? ಎಂದೂ ಕೋರ್ಟ್ ಕೇಳಿದೆ.

ಮದರಸಾದಿಂದ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ವಿದ್ಯಾರ್ಥಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರ ಸಂಖ್ಯೆಯನ್ನೂ ಹೆಚ್ಚಿಸಬೇಕೆಂದು ಮನವಿ ಮಾಡಲಾಗಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com