ಬ್ರಾಹ್ಮಣರ ಮತ ಸೆಳೆಯುವ ಬಿಜೆಪಿ ಯತ್ನಕ್ಕೆ ವಿಪಕ್ಷಗಳಿಂದ ತೀವ್ರ ಟೀಕೆ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬಿಜೆಪಿ ರಾಜ್ಯದಲ್ಲಿನ ಬ್ರಾಹ್ಮಣ ಸಮುದಾಯದ ಮತಗಳನ್ನು ಸೆಳೆಯುವುದಕ್ಕೆ ಮುಂದಾಗಿದ್ದು ಇದಕ್ಕಾಗಿ ಪ್ರತ್ಯೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. 
ಬಿಜೆಪಿ
ಬಿಜೆಪಿ

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬಿಜೆಪಿ ರಾಜ್ಯದಲ್ಲಿನ ಬ್ರಾಹ್ಮಣ ಸಮುದಾಯದ ಮತಗಳನ್ನು ಸೆಳೆಯುವುದಕ್ಕೆ ಮುಂದಾಗಿದ್ದು ಇದಕ್ಕಾಗಿ ಪ್ರತ್ಯೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. 

ಬಿಜೆಪಿಯ ಈ ನಡೆ ಬಿಎಸ್ ಪಿ ಸೇರಿದಂತೆ ವಿಪಕ್ಷಗಳ ಟೀಕೆಗೆ ಗುರಿಯಾಗಿದೆ. "ಬಿಜೆಪಿಯ 4 ವರ್ಷಗಳ ಆಡಳಿತದಲ್ಲಿ ಬ್ರಾಹ್ಮಣ ಸಮುದಾಯದ ದಬ್ಬಾಳಿಕೆಯನ್ನು ಎದುರಿಸಿದೆ, ಚುನಾವಣೆ ಎದುರಾಗಿರುವ ಹಿನ್ನೆಲೆಯಲ್ಲಿ ಈಗ ಬಿಜೆಪಿ ಬ್ರಾಹ್ಮಣರನ್ನು ನೆನಪಿಸಿಕೊಳ್ಳುತ್ತಿದೆ ಎಂದು ವಿಪಕ್ಷಗಳು ಟೀಕೆ ಮಾಡಿವೆ. 

ಸೆ.5 ರಿಂದ 403 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಬ್ರಾಹ್ಮಣ ಸಮುದಾಯಕ್ಕಾಗಿಯೇ ಸರಣಿ ಕಾನ್ಫರೆನ್ಸ್ ಗಳನ್ನು ಹಮ್ಮಿಕೊಂಡಿದೆ.

ಸಮುದಾಯದ ಶಿಕ್ಷಕರು, ಇಂಜಿನಿಯರ್ ಗಳು, ವೈದ್ಯರು, ಸಾಹಿತಿಗಳಿಗೆ ಕೇಂದ್ರ ಹಾಗೂ ರಾಜ್ಯಗಳಲ್ಲಿ ಸಮುದಾಯಕ್ಕಾಗಿ ಬಿಜೆಪಿಯ ಕೆಲಸ ಹಾಗೂ ಯೋಜನೆಗಳನ್ನು ತಿಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. 

ಬಿಜೆಪಿಯ ನಡೆಗೆ ಬಿಎಸ್ ಪಿ ತೀವ್ರ ಟೀಕಾ ಪ್ರಹಾರ ನಡೆಸಿದ್ದು, ಜು.23 ರಿಂದ ನಮ್ಮ ಪಕ್ಷ ಆಯೋಜಿಸಿದ್ದ "ಪ್ರಬುದ್ಧ ವರ್ಗ ಸಮ್ಮೇಳನದ ಯಶಸ್ಸು ಬಿಜೆಪಿಯ ನಿದ್ದೆಗೆಡಿಸಿದೆ. ಆದ್ದರಿಂದ ಬಿಜೆಪಿ ಇಂಥಹದ್ದೇ ಕಾರ್ಯಕ್ರಮವನ್ನು ನಕಲು ಮಾಡಿದೆ" ಎಂದು ಬಿಎಸ್ ಪಿ ಆರೋಪಿಸಿದೆ. 

ಬಿಎಸ್ ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರ, ಬ್ರಾಹ್ಮಣರ ಮತಗಳನ್ನು ಸೆಳೆಯುವುದಕ್ಕಾಗಿ  ಅಯೋಧ್ಯೆಯಿಂದ ಪ್ರಚಾರವನ್ನು ಪ್ರಾರಂಭಿಸಿದ್ದು, ಬಿಎಸ್ ಪಿ ಅಧಿಕಾರಕ್ಕೆ ಬಂದಲ್ಲಿ ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡುವುದಾಗಿ ಭರವಸೆ ನೀಡಿದ್ದಾರೆ. 

ಬಿಎಸ್ ಪಿ ಮಾದರಿಯಲ್ಲೇ ಸಮಾಜವಾದಿ ಪಕ್ಷ ಸಹ ಸಮುದಾಯಕ್ಕೆ ಸಂಬಂಧಿಸಿದ ಸರಣಿ ಸಭೆಗಳನ್ನು ಆ.23 ರಿಂದ ಪ್ರಾರಂಭಿಸಿದೆ. ಈ ಎರಡೂ ಪಕ್ಷಗಳಂತೆಯೇ ಈಗ ಬಿಜೆಪಿಯೂ, ರಾಜ್ಯದಲ್ಲಿ ಶೇ.13 ರಷ್ಟಿರುವ ಸಮುದಾಯದ ಮತಗಳನ್ನು ಸೆಳೆಯುವುದಕ್ಕೆ ಯತ್ನಿಸುತ್ತಿದೆ. 

ಇನ್ನು ಕಾಂಗ್ರೆಸ್ ಕೂಡ ಟೀಕೆ ಮಾಡುವುದರಿಂದ ಹೊರತಾಗಿಲ್ಲ. "ಈ ಎಲ್ಲಾ ಪಕ್ಷಗಳು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತ್ರ ಸಮುದಾಯದ ಬಗ್ಗೆ ಮಾತನಾಡುತ್ತಿವೆ. ಬಿಜೆಪಿ, ಬಿಎಸ್ ಪಿ, ಎಸ್ ಪಿಗಳಿಗೆ ಬ್ರಾಹ್ಮಣರ ಬಗ್ಗೆ ಅಷ್ಟೊಂದು ಪ್ರೀತಿ ಇದ್ದಲ್ಲಿ ಅದೇ ಸಮುದಾಯದವರನ್ನು ಏಕೆ ಸಿಎಂ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿಲ್ಲ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. 

"ಕಾಂಗ್ರೆಸ್ ಉತ್ತರ ಪ್ರದೇಶಕ್ಕೆ 6 ಮಂದಿ ಬ್ರಾಹ್ಮಣ ಸಿಎಂ ಗಳನ್ನು ನೀಡಿದೆ. ಈಗ ಸಮುದಾಯದ ಮನವೊಲಿಕೆಗೆ ಯತ್ನಿಸುತ್ತಿರುವ ಪಕ್ಷಗಳು ಆ ಸಮುದಾಯದಿಂದ ಎಷ್ಟು ಮಂದಿ ಸಿಎಂಗಳನ್ನು ನೀಡಿದೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com