ಚಿಟ್ ಫಂಡ್ ಹಗರಣ: ಒಡಿಶಾ ಪೊಲೀಸರಿಂದ ವೈಎಸ್ ಆರ್ ಕಾಂಗ್ರೆಸ್ ಮುಖಂಡನ ಬಂಧನ
ಸುಮಾರು 1,200 ಕೋಟಿ ಮೊತ್ತದ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಹಾಗೂ ಆಂಧ್ರ ಪ್ರದೇಶ ಶಿಕ್ಷಣ ಮತ್ತು ಕಲ್ಯಾಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಲ್ಲ ವಿಜಯ ಪ್ರಸಾದ್ ಅವರನ್ನು ಓಡಿಶಾದ ಆರ್ಥಿಕ ಅಪರಾಧ ಘಟಕದ ಪೊಲೀಸರು ಬಂಧಿಸಿದ್ದಾರೆ.
Published: 07th September 2021 03:40 PM | Last Updated: 07th September 2021 06:44 PM | A+A A-

ಮಲ್ಲ ವಿಜಯ ಪ್ರಸಾದ್
ವಿಶಾಖಪಟ್ಟಣಂ: ಸುಮಾರು 1,200 ಕೋಟಿ ಮೊತ್ತದ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಹಾಗೂ ಆಂಧ್ರ ಪ್ರದೇಶ ಶಿಕ್ಷಣ ಮತ್ತು ಕಲ್ಯಾಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಲ್ಲ ವಿಜಯ ಪ್ರಸಾದ್ ಅವರನ್ನು ಓಡಿಶಾದ ಆರ್ಥಿಕ ಅಪರಾಧ ಘಟಕದ ಪೊಲೀಸರು ಬಂಧಿಸಿದ್ದಾರೆ.
ಜುಲೈ 2019 ರಂದು ದಾಖಲಾಗಿದ್ದ ದೂರಿನ ಆಧಾರದ ಮೇಲೆ ವಿಚಾರಣೆ ಭಾಗವಾಗಿ ಇನ್ಸ್ ಪೆಕ್ಟರ್ ಟಿ ಆರ್ ಸಾಹು ನೇತೃತ್ವದಲ್ಲಿನ ಒಡಿಶಾ ಸಿಐಡಿ ಅಪರಾಧ ವಿಭಾಗದ ವಿಶೇಷ ತಂಡವೊಂದು ವಿಜಯ್ ಪ್ರಸಾದ್ ಅವರನ್ನು ಸೋಮವಾರ ವಶಕ್ಕೆ ಪಡೆಯಿತು. ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಮ್ಯಾಜಿಸ್ಟ್ರೇಟ್ ಅನುಮತಿ ಮೇರೆಗೆ ಅವರನ್ನು ಭುವನೇಶ್ವರಕ್ಕೆ ಕರೆದೊಯ್ಯಲಾಯಿತು.
ಐಪಿಸಿ ಸೆಕ್ಷನ್ 4,5,6 ಮತ್ತು ಎಂಸಿ ಸ್ಕೀಮ್ಸ್ ( ನಿರ್ಬಂಧ ) ಕಾಯ್ದೆ 1978, ಮತ್ತು 2011ರ ಒಪಿಐಡಿ ಕಾಯ್ದೆ ಸೆಕ್ಷನ್ 8 ರ ಅಡಿಯಲ್ಲಿ ಜುಲೈ 17, 2019ರಂದು ಒಡಿಶಾದಲ್ಲಿ ಪ್ರಕರಣ ದಾಖಲಾಗಿತ್ತು. ವೆಲ್ಫೇರ್ ಬಿಲ್ಡಿಂಗ್ ಮತ್ತು ಎಸ್ಟೇಟ್ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ವಿಜಯ ಪ್ರಸಾದ್, 1200 ಕೋಟಿ ರೂ. ಮೊತ್ತದ ಹಗರಣದಲ್ಲಿ ಆಂಧ್ರ ಪ್ರದೇಶ, ಒಡಿಶಾ, ಛತ್ತೀಸ್ ಗಢ ಮತ್ತು ತೆಲಂಗಾಣದ ಠೇವಣಿದಾರರಿಗೆ ವಂಚನೆ ಮಾಡಿರುವ ಆರೋಪಕ್ಕೆ ಸಿಲುಕಿದ್ದಾರೆ. ಈ ರಾಜ್ಯಗಳಲ್ಲಿ ಠೇವಣಿದಾರರಿಂದ ಪ್ರತಿ ತಿಂಗಳು ಹಣ ಸಂಗ್ರಹಿಸಿದ್ದ ವೆಲ್ಪೇರ್ ಗ್ರೂಪ್, ಯೋಜನೆಯ ಅವಧಿ ಪೂರ್ಣಗೊಂಡಿದ್ದರೂ, ರೇವಣಿದಾರರಿಗೆ ಹಣವನ್ನು ಪಾವತಿಸಿರಲಿಲ್ಲ.
ಈ ಹಿಂದೆ 2016ರಲ್ಲಿ ಇದೇ ರೀತಿಯ ದೂರಿನ ಆಧಾರದ ಮೇಲೆ ವಿಜಯ್ ಪ್ರಸಾದ್ ಅವರಿಗೆ ಸೇರಿದ ಸಂಸ್ಥೆಗಳು ಸೇರಿದಂತೆ 33 ಖಾಸಗಿ ಸಂಸ್ಥೆಗಳ ವಿರುದ್ಧ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿತ್ತು. ಆತನ ಮನೆ ಮತ್ತು ಆಸ್ತಿಯಲ್ಲ ಜಾಲಾಡಿ, ಸೂಕ್ತ ದಾಖಲೆಯಿಲ್ಲದ ಹಣವನ್ನು ವಶಕ್ಕೆ ಪಡೆಯಲಾಗಿತ್ತು.
ವಿಶಾಖಪಟ್ಟಣಂನ ಕಾಂಗ್ರೆಸ್ ಶಾಸಕರಾಗಿದ್ದ ವಿಜಯ ಪ್ರಸಾದ್ ನಂತರ ವೈಸ್ ಆರ್ ಕಾಂಗ್ರೆಸ್ ಸೇರಿದ್ದರು. 2019ರಲ್ಲಿ ನಡೆದ ಚುನಾವಣೆಯಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದಿಂದ ವಿಶಾಖಪಟ್ಟಣಂ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವಿಜಯ್ ಪ್ರಸಾದ್,. ಟಿಡಿಪಿ ಅಭ್ಯರ್ಥಿ ಪಿವಿಜಿಆರ್ ನಾಯ್ಡು ಎದುರು ಸೋತಿದ್ದರು.