ದೇಶದಲ್ಲಿ ಶೇ.58 ರಷ್ಟು ವಯಸ್ಕರಿಗೆ ಮೊದಲ ಡೋಸ್ ಲಸಿಕೆ; ಎರಡನೇ ಅಲೆ ಇನ್ನೂ ಮುಗಿದಿಲ್ಲ: ಕೇಂದ್ರ ಸರ್ಕಾರ

ದೇಶಾದ್ಯಂತ ಸುಮಾರು 71 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ ಶೇ. 58 ರಷ್ಟು ವಯಸ್ಕರು ಮೊದಲ ಡೋಸ್ ಲಸಿಕೆ ಪಡೆದಿದ್ದರೆ, ಶೇ.18 ರಷ್ಟು ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶಾದ್ಯಂತ ಸುಮಾರು 71 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ ಶೇ. 58 ರಷ್ಟು ವಯಸ್ಕರು ಮೊದಲ ಡೋಸ್ ಲಸಿಕೆ ಪಡೆದಿದ್ದರೆ, ಶೇ. 18 ರಷ್ಟು ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಕೋವಿಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ವಿಕೆ ಪೌಲ್,  ಕೊರೋನಾವೈರಸ್ ಸಾಂಕ್ರಾಮಿಕ ಇನ್ನೂ ಮುಂದುವರೆದಿದೆ. ಎರಡನೇ ಅಲೆ ಇನ್ನೂ ಮುಗಿದಿಲ್ಲ ಎಂದರು. 

ಕೋವಿಡ್-19 ಸೋಂಕಿನ ವಿರುದ್ಧ ಲಸಿಕೆ ಪ್ರಮುಖವಾದ ಶೀಲ್ದ್ ಆಗಿದೆ. ಲಸಿಕೆಗಳು ಲಭ್ಯವಿದ್ದು, ಜನರು ಲಸಿಕೆ ಪಡೆಯುವಂತೆ ಮನವಿ ಮಾಡುತ್ತೇವೆ. ಮೊದಲ ಡೋಸ್ ಪಡೆದ ನಂತರವೇ ಎರಡನೇ ಡೋಸ್ ಪಡೆಯಿರಿ, ಇದು ಕೋವಿಡ್ ನಿಂದ ಸಾವು ಸಂಭವಿಸದಂತೆ ಭರವಸೆ ನೀಡುತ್ತದೆ ಎಂದು ಅವರು ಹೇಳಿದರು.

ಸಂಪೂರ್ಣ ಲಸಿಕೆ ಪಡೆದವರಲ್ಲಿ ಸೋಂಕು ಕಾಣಿಸಿಕೊಂಡರೂ, ಸಾವಿನ ಹಂತದವರೆಗೂ ಹೋಗುವುದಿಲ್ಲ, ಆಸ್ಪತ್ರೆಗೆ ದಾಖಲಾಗುವುದು ತೀರಾ ಕಡಿಮೆಯಾಗಿರುತ್ತದೆ. ಕೋವಿಡ್-19 ಲಸಿಕೆಯ ಮೊದಲ ಡೋಸ್  ಸಾವು ಪ್ರಕರಣಗಳನ್ನು ತಡೆಯುವಲ್ಲಿ ಶೇ 96. 6 ರಷ್ಟು ಪರಿಣಾಮಕಾರಿಯಾಗಿದ್ದರೆ 2ನೇ ಡೋಸ್ ಶೇ. 97. 5 ರಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಿದರು.  

ಏಪ್ರಿಲ್ ಮತ್ತು ಆಗಸ್ಟ್ ನಡುವೆ ಲಸಿಕೆ ತಡೆದಿರುವ ಸಾವು ಕುರಿತ ಮಾಹಿತಿಯನ್ನು ಉಲ್ಲೇಖಿಸಿದ ಅವರು,  ಏಪ್ರಿಲ್ - ಮೇ ನಲ್ಲಿ ಎರಡನೇ ಅಲೆ ವೇಳೆಯಲ್ಲಿ ಲಸಿಕೆ ಪಡೆಯದವರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿರುವುದಾಗಿ ವರದಿಯಾಗಿರುವುದಾಗಿ ತಿಳಿಸಿದರು.

ಉತ್ತರ ಪ್ರದೇಶದಲ್ಲಿ ಮಕ್ಕಳ ಸಾವಿಗೆ ಡೆಂಘೀ ಜ್ವರ ಕಾರಣ ಎಂದು ಡಾ. ಪೌಲ್ ಹೇಳಿದರು. ದೇಶದಲ್ಲಿ ಇಂದು 43, 263 ಹೊಸ ಕೊರೋನಾ ಪ್ರಕರಣ ಹಾಗೂ 338 ಸಾವು ಪ್ರಕರಣಗಳು ವರದಿಯಾಗಿವೆ. ಸಾಂಕ್ರಾಮಿಕ ಕಾಣಿಸಿಕೊಂಡಾಗಿನಿಂದಲೂ ಈವರೆಗೂ ಒಟ್ಟಾರೇ 4,41,749 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ದೇಶದ 35 ಜಿಲ್ಲೆಗಳಲ್ಲಿ ಈಗಲೂ ಸಾಪ್ತಾಹಿಕ ಶೇ 10 ರಷ್ಟು ಕೋವಿಡ್ ಪಾಸಿಟಿವಿಟಿ ದರವಿದ್ದರೆ, 30 ಜಿಲ್ಲೆಗಳಲ್ಲಿ ಇದು ಶೇ. 5ರಿಂದ 10 ರಷ್ಟಿದೆ. ಸಿಕ್ಕಿಂ, ದಾದ್ರಾ ಮತ್ತು ನಾಗರ್ ಹವೇಲಿ, ಹಿಮಾಚಲ ಪ್ರದೇಶದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರು ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಮಕ್ಕಳಿಗೆ ಲಸಿಕೆ ಬಗ್ಗೆ ಯಾವುದೇ ವೈಜ್ಞಾನಿಕ ಸಂಸ್ಥೆಗಳು ಅಥವಾ ಪುರಾವೆಗಳು ಸಲಹೆ ನೀಡಿಲ್ಲ, ಆದಾಗ್ಯೂ,  ಶಿಕ್ಷಕರು, ಶಾಲಾ ಸಿಬ್ಬಂದಿ ಮತ್ತು ಪೋಷಕರು ಲಸಿಕೆ ಪಡೆಯಬಹುದು ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com