ಇತರ ದೇಶಗಳ ವಿರುದ್ಧ ಭಯೋತ್ಪಾದಕ ದಾಳಿಗೆ ಅಫ್ಘಾನ್ ನೆಲ ಬಳಕೆಯಾಗಬಾರದು: ಬ್ರಿಕ್ಸ್

ಅಫ್ಘಾನಿಸ್ತಾನದ ನೆಲವನ್ನು ಇತರ ದೇಶಗಳ ವಿರುದ್ಧ ಭಯೋತ್ಪಾದಕ ದಾಳಿ ನಡೆಸಲು ಬಳಕೆಯಾಗಬಾರದು ಎಂದು ಐದು ಪ್ರಭಾವಿ ದೇಶಗಳ ಗುಂಪು ಬ್ರಿಕ್ಸ್ ಶೃಂಗಸಭೆ ಗುರುವಾರ ಹೇಳಿದೆ.
ಬ್ರಿಕ್ಸ್ ದೇಶಗಳ ನಾಯಕರು
ಬ್ರಿಕ್ಸ್ ದೇಶಗಳ ನಾಯಕರು

ನವದೆಹಲಿ: ಅಫ್ಘಾನಿಸ್ತಾನದ ನೆಲವನ್ನು ಇತರ ದೇಶಗಳ ವಿರುದ್ಧ ಭಯೋತ್ಪಾದಕ ದಾಳಿ ನಡೆಸಲು ಬಳಕೆಯಾಗಬಾರದು ಎಂದು ಐದು ಪ್ರಭಾವಿ ದೇಶಗಳ ಗುಂಪು ಬ್ರಿಕ್ಸ್ ಶೃಂಗಸಭೆ ಗುರುವಾರ ಹೇಳಿದೆ.

ಗಡಿಯಾಚೆಗಿನ ಉಗ್ರ ದಾಳಿ ಸೇರಿದಂತೆ ಯಾವುದೇ ರೀತಿಯ ಭಯೋತ್ಪಾದನೆಯನ್ನು ಸಮರ್ಥವಾಗಿ ನಿಯಂತ್ರಿಸಬೇಕು ಎಂದು ಬ್ರಿಕ್ಸ್ ಕರೆ ನೀಡಿದೆ.

ಭಾರತ ಆಯೋಜಿಸಿದ್ದ ಬ್ರಿಕ್ಸ್ ವಾರ್ಷಿಕ ಶೃಂಗಸಭೆಯ ಅಧ್ಯಕ್ಷತೆ ವಹಿಸಿ ವರ್ಚುವಲ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ,  ಐದು ರಾಷ್ಟ್ರಗಳು ಬ್ರಿಕ್ಸ್ ಭಯೋತ್ಪಾದನಾ ನಿಗ್ರಹ ಯೋಜನೆಯನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಿವೆ. ಅಫ್ಘಾನಿಸ್ತಾನವನ್ನು ತಾಲಿಬಾನ್‌ಗಳು ಸ್ವಾಧೀನಪಡಿಸಿಕೊಂಡಿದ್ದರಿಂದ ಈ ಪ್ರದೇಶವು ಹಲವಾರು ಭದ್ರತಾ ಸವಾಲುಗಳನ್ನು ಎದುರಿಸುತ್ತಿದೆ ಎಂದರು. 

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ವರ್ಚುವಲ್ ಶೃಂಗಸಭೆಯಲ್ಲಿ ಅಫ್ಘಾನಿಸ್ತಾನದ ಪರಿಸ್ಥಿತಿ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಗುಂಪು ಸಮಾಲೋಚನೆ ನಡೆಯಿತು.

ಶೃಂಗಸಭೆಯ ಕೊನೆಯಲ್ಲಿ ನೀಡಿದ ಘೋಷಣೆಯಲ್ಲಿ, ಗುಂಪು ಹಿಂಸಾಚಾರದಿಂದ ದೂರವಿರಲು ಮತ್ತು ಅಫ್ಘಾನಿಸ್ತಾನದಲ್ಲಿ ಶಾಂತಿಯುತ ವಿಧಾನದಿಂದ ಪರಿಸ್ಥಿತಿಯನ್ನು ಬಗೆಹರಿಸಲು ಕರೆ ನೀಡಿದೆ. "ನಾವು ಹಿಂಸಾಚಾರದಿಂದ ದೂರವಿರಲು ಮತ್ತು ಶಾಂತಿಯುತ ವಿಧಾನದಿಂದ ಪರಿಸ್ಥಿತಿಯನ್ನು ಇತ್ಯರ್ಥಗೊಳಿಸಲು ಕರೆ ನೀಡುತ್ತೇವೆ. ದೇಶದಲ್ಲಿ ಸ್ಥಿರತೆ, ನಾಗರಿಕ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಅಫ್ಘಾನ್ ಒಳಗಿನ ಮಾತುಕತೆಯನ್ನು ಉತ್ತೇಜಿಸಲು ನಮ್ಮ ಕೊಡುಗೆ ನೀಡುವ ಅಗತ್ಯವನ್ನು ಒತ್ತಿ ಹೇಳುತ್ತೇವೆ" ಎಂದು ಬ್ರಿಕ್ಸ್ ಹೇಳಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಮತ್ತು ಬ್ರೆಜಿಲ್‌ನ ಜೈರ್ ಬೋಲ್ಸನಾರೊ ಅವರು ಶೃಂಗ ಸಭೆಯಲ್ಲಿ ಭಾಗವಹಿಸಿದ್ದರು.

ಬ್ರಿಕ್ಸ್(ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ) ವಿಶ್ವದ ಐದು ದೊಡ್ಡ ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಒಳಗೊಂಡಿದ್ದು, ಇದು ಜಾಗತಿಕ ಜನಸಂಖ್ಯೆಯ ಶೇ. 41 ರಷ್ಟು, ಜಾಗತಿಕ ಜಿಡಿಪಿಯ ಶೇ. 24 ರಷ್ಟು ಮತ್ತು ಜಾಗತಿಕ ವ್ಯಾಪಾರದ ಶೇ. 16 ರಷ್ಟು ಪ್ರತಿನಿಧಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com