ಪಂಚಾಯತ್ ಚುನಾವಣೆ ನಡುವಲ್ಲೇ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹಣ ಹಂಚುತ್ತಿರುವ ವಿಡಿಯೋ ವೈರಲ್!

ಪಂಚಾಯತ್ ಚುನಾವಣೆ ನಡುವಲ್ಲೇ ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮಹಿಳೆಯರಿಗೆ ಹಣ ಹಂಚುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. 
ತೇಜಸ್ವಿ ಯಾದವ್
ತೇಜಸ್ವಿ ಯಾದವ್

ನವದೆಹಲಿ: ಪಂಚಾಯತ್ ಚುನಾವಣೆ ನಡುವಲ್ಲೇ ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮಹಿಳೆಯರಿಗೆ ಹಣ ಹಂಚುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. 

ವೈರಲ್ ಆಗಿರುವ ವಿಡಿಯೋದಲ್ಲಿ ತೇಜಸ್ವಿ ಅವರು ಕಾರಿನಲ್ಲಿ ಕುಳಿತಿರುವುದು ಕಂಡು ಬಂದಿದ್ದು,ಈ ವೇಳೆ ಅವರ ಬಳಿ ಬಂದ ಮಹಿಳೆಯರಿಗೆ ರೂ.500 ಮುಖಬೆಲೆಯ ನೋಟುಗಳನ್ನು ನೀಡಿರುವುದು ಕಂಡು ಬಂದಿದೆ. ಆರ್‌ಜೆಡಿ ನಾಯಕ ನೀಡಿದ ಹಣವನ್ನು ಮಹಿಳೆಯರು ಸ್ವೀಕರಿಸಿ ಅವರಿಗೆ ಕೈಮುಗಿದಿದ್ದಾರೆ.

ಗುರುವಾರ ಸಂಜೆ ಗೋಪಾಲಗಂಜ್‌ನಲ್ಲಿ ತೇಜಸ್ವಿಯವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಅವರು ಮಹಿಳೆಯರಿಗೆ ಹಣ ಹಂಚುತ್ತಿರುವ ವಿಡಿಯೋವನ್ನು ಜೆಡಿಯು ಎಂಎಲ್‌ಸಿ ನೀರಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ. 

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ ವಾಪಸ್ ಬರುತ್ತಿದ್ದಾಗ ತೇಜಸ್ವಿಯರು ಮಹಿಳೆಯರಿಗೆ ಹಣ ಹಂಚಿದ್ದಾರೆ ಎಂದು ಜೆಡಿಯು ಎಂಎಲ್‌ಸಿ ಹೇಳಿದ್ದಾರೆ. 

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಈ ವಿಡಿಯೋದಲ್ಲಿ ತೇಜಸ್ವಿಯರು ಬಡ ಮಹಿಳೆಯರಿಗೆ ತಾನು ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಅವರ ಮಗ ಎಂದು ಪರಿಚಯಿಸಿಕೊಂಡಿದ್ದಾರೆ. ‘ನಾನು ಲಾಲೂ ಜೀ ಅವರ ಮಗ ತೇಜಸ್ವಿ ಯಾದವ್’ ಎಂದು ಅವರು ಹೇಳಿರುವುದನ್ನು ವಿಡಿಯೋದಲ್ಲಿವ ಕಾಣಬಹುದಾಗಿದೆ.

ಈ ವಿಡಿಯೋವನ್ನು ಬಿಡುಗಡೆ ಮಾಡಿದ ಜೆಡಿಯು ನಾಯಕ ನೀರಜ್ ಕುಮಾರ್, ತೇಜಸ್ವಿ ಯಾದವ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಜೆಡಿಯು ನಾಯಕ ತೇಜಸ್ವಿ ತನ್ನದೇಯಾದ ಗುರುತು ಹೊಂದಿಲ್ಲವೆಂಬುದು ಈ ವಿಡಿಯೋದಿಂದ ತಿಳಿಯುತ್ತದೆ. ಏಕೆಂದರೆ ಅವರು ಸಹಾನುಭೂತಿಯ ಆಧಾರದ ಮೇಲೆ ನಾಯಕರಾಗಿ ಉಳಿದಿದ್ದಾರೆ. ಅವರ ತಂದೆ ಲಾಲೂ ಪ್ರಸಾದ್‌ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆಂದು ಕುಟುಕಿದ್ದಾರೆ. ‘ಬಡವರಿಗೆ ಹೀಗೆ ಹಣ ನೀಡುವ ಬದಲು ಲಾಲೂ ಪ್ರಸಾದ್ ಯಾದವ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಮಂತ್ರಿಯಾಗಿದ್ದಾಗ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ವಾಪಸ್ ವಿತರಿಸಬೇಕು ಎಂದು ನೀರಜ್ ಆಗ್ರಹಿಸಿದ್ದಾರೆ.

‘ಲಾಲೂ ಪ್ರಸಾದ್ ಯಾದವ್ ಕೂಡ ಬಡವರನ್ನು ವಂಚಿಸಿದ್ದಾರೆ, ಆದರೆ ತೇಜಸ್ವಿ ಯಾದವ್ ಅವರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಸಹಾನುಭೂತಿಯ ಆಧಾರದ ಮೇಲೆ ತೇಜಸ್ವಿ ಉನ್ನತ ಹುದ್ದೆ ಪಡೆದಿದ್ದಾರೆ. ಆದರೆ ಅವರು ಇನ್ನೂ ತಂದೆಯ ಹೆಸರಿನಲ್ಲಿಯೇ ಗುರುತಿಸಿಕೊಳ್ಳುತ್ತಿದ್ದಾರೆ. ಅವರೇ ಸ್ವತಃ ಅದನ್ನು ಒಪ್ಪಿಕೊಳ್ಳುತ್ತಾರೆ. ತೇಜಸ್ವಿ ಬಡವರಿಗೆ ಏನನ್ನಾದರೂ ನೀಡಬೇಕಾದರೆ ಲಾಲೂ ಪ್ರಸಾದ್ ಕುಟುಂಬದ ಹೆಸರಿನಲ್ಲಿರುವ ಭೂಮಿಯನ್ನು ವಾಪಸ್ ನೀಡಬೇಕಿತ್ತು’ ಎಂದು ನೀರಜ್ ಕಿಡಿಕಾರಿದ್ದಾರೆ.

ಈ ನಡುವೆ ವಿಡಿಯೋ ವೈರಲ್ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಜೆಡಿ, ‘ಬಡವರಿಗೆ ಸಹಾಯ ಮಾಡುವುದರಲ್ಲಿ ತಪ್ಪೇನಿದೆ’ ಅಂತಾ ಸ್ಪಷ್ಟೀಕರಣ ನೀಡಿದೆ. ಪಂಚಾಯತ್ ಚುನಾವಣೆಗಳ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬಿಹಾರ ಸರ್ಕಾರವು ದೊಡ್ಡ ಪ್ರಮಾಣದ ವರ್ಗಾವಣೆಯನ್ನು ಮಾಡುತ್ತಿದೆ. ತೇಜಸ್ವಿ ಬಡವರಿಗೆ ಸಹಾಯ ಮಾಡುವುದರಲ್ಲಿ ಏನು ತಪ್ಪಿಲ್ಲ’ ಎಂದು ತಿರುಗೇಟು ನೀಡಿದೆ.   

ಹಣ ಹಂಚಿಕೆ ಸಂಬಂಧ ತನಿಖೆ ನಡೆಸುವಂತೆ ಜೆಡಿಯು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದು, ಈ ಹಿನ್ನೆಲೆಯಲ್ಲಿ ಗೋಪಾಲ್ಗಂಜ್ ಸಾದರ್ ಎಸ್'ಡಿಎಂ ಈ ಸಂಬಂಧ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com