ಕೃಷಿ ಕಾಯ್ದೆಗಳ ವಿರುದ್ಧ 'ಕರಾಳ ಶುಕ್ರವಾರ' ಆಚರಿಸಲು ಶಿರೋಮಣಿ ಅಕಾಲಿ ದಳ ಕರೆ: ಗಡಿ ಮುಚ್ಚಿದ ದೆಹಲಿ ಪೊಲೀಸರು
ವಿವಾದಾತ್ಮಕ ಕೃಷಿ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿ ಇಂದಿಗೆ ಸರಿಯಾಗಿ ಒಂದು ವರ್ಷ ಪೂರೈಸಿದ್ದು, ಈ ಹಿನ್ನೆಲೆ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) 'ಕರಾಳ ಶುಕ್ರವಾರ' ಆಚರಿಸಲು ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದೆ.
Published: 17th September 2021 01:21 PM | Last Updated: 17th September 2021 01:28 PM | A+A A-

ಸಂಗ್ರಹ ಚಿತ್ರ
ನವದೆಹಲಿ: ವಿವಾದಾತ್ಮಕ ಕೃಷಿ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿ ಇಂದಿಗೆ ಸರಿಯಾಗಿ ಒಂದು ವರ್ಷ ಪೂರೈಸಿದ್ದು, ಈ ಹಿನ್ನೆಲೆ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) 'ಕರಾಳ ಶುಕ್ರವಾರ' ಆಚರಿಸಲು ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದೆ.
ರೈತರ ಪ್ರತಿಭಟನೆ ಹಿನ್ನೆಲೆ ದೆಹಲಿ ಸಂಚಾರಿ ಪೋಲಿಸರು ಜರೋಡ ಕಲಾನ್ ಗಡಿಯನ್ನು ಬ್ಯಾರಿಕೇಡ್‌ಗಳನ್ನು ಬಳಸಿ ಮುಚ್ಚಿದ್ದಾರೆ ಮತ್ತು ಸಾರ್ವಜನಿಕರಿಗೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಿದ್ದಾರೆ.
ಜರೋಡ ಕಲಾನ್ ಪ್ರದೇಶದ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನಾ ಮೆರವಣಿಗೆ ಆರಂಭ
ದೆಹಲಿಯ ಸಂಸತ್ ಭವನದ ಬಳಿಯಿರುವ ಐತಿಹಾಸಿಕ ಗುರುದ್ವಾರವಾದ ಗುರುದ್ವಾರ ರಾಕಾಬ್ ಗಂಜ್ ಸಾಹಿಬ್ವರೆಗೆ ಶಿರೋಮಣಿ ಅಕಾಲಿ ದಳದ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟಿದ್ದು, ಅಪಾರ ಪ್ರಮಾಣದಲ್ಲಿ ರೈತರು ಪಾಲ್ಗೊಂಡಿದ್ದಾರೆ.
ಕೇಂದ್ರ ಸರ್ಕಾರ ಮಂಡಿಸಿದ್ದ 3 ನೂತನ ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಮಸೂದೆಗಳಿಗೆ 2020ರ ಸೆ.17ರಂದು ಲೋಕಸಭೆ ಅನುಮೋದನೆ ನೀಡಿತ್ತು. ಸೆ.20ರಂದು ರಾಜ್ಯಸಭೆ ಸಮ್ಮತಿ ಸೂಚಿಸಿದ್ದು, ಸೆ.27ರಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅನುಮೋದನೆ ನೀಡಿದ್ದರು.
ವಿರೋಧ-ಪ್ರತಿಭಟನೆಗಳ ನಡುವೆಯೂ ಕೃಷಿ ಕಾಯ್ದೆ ಜಾರಿಗೆ ಬಂದಿತ್ತು. ಆದರೆ ವರ್ಷ ಕಳೆದರೂ ರೈತರು ತಮ್ಮ ಪ್ರತಿಭಟನೆ ನಿಲ್ಲಿಸಿಲ್ಲ. ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ವರೆಗೂ ಹೋರಾಟ ಮುಂದುವರೆಸುವುದಾಗಿ ಪಣ ತೊಟ್ಟಿದ್ದಾರೆ.