ಪ್ರಯಾಗ್ ರಾಜ್: ಅಖಾಡ ಪರಿಷತ್ ಮುಖ್ಯಸ್ಥ ಮಹಾಂತ ನರೇಂದ್ರ ಗಿರಿ ಶವವಾಗಿ ಪತ್ತೆ
ಆಘಾತಕಾರಿ ಘಟನೆಯೊಂದರಲ್ಲಿ, ಅಖಿಲ ಭಾರತೀಯ ಅಖಾರ ಪರಿಷತ್ತಿನ ಅಧ್ಯಕ್ಷ ಆಚಾರ್ಯ ನರೇಂದ್ರ ಗಿರಿ ಅವರು ಸೋಮವಾರ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದಾರೆ.
Published: 20th September 2021 08:12 PM | Last Updated: 20th September 2021 09:00 PM | A+A A-

ಅಖಾಡ ಪರಿಷತ್ ಮುಖ್ಯಸ್ಥ ಮಹಾಂತ ನರೇಂದ್ರ ಗಿರಿ
ಪ್ರಯಾಗ್ ರಾಜ್: ಆಘಾತಕಾರಿ ಘಟನೆಯೊಂದರಲ್ಲಿ, ಅಖಿಲ ಭಾರತೀಯ ಅಖಾರ ಪರಿಷತ್ತಿನ ಅಧ್ಯಕ್ಷ ಆಚಾರ್ಯ ನರೇಂದ್ರ ಗಿರಿ ಅವರು ಸೋಮವಾರ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗರಾಜ್‌ನ ಬಘಂಬರಿ ಮಠದಲ್ಲಿ ಮಹಾಂತ ನರೇಂದ್ರ ಗಿರಿ ಅವರ ಶವ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಅವರ ಸಾವಿಗೆ ನಿಖರ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಪ್ರಸ್ತುತ ಘಟನಾ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಿದ್ದಾರೆ.
ಇನ್ನು ಮಹಾಂತ ನರೇಂದ್ರ ಗಿರಿ ಅವರ ನಿಧನಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರು ಸಂತಾಪ ಸೂಚಿಸಿದ್ದು, 'ಅಖಿಲ ಭಾರತೀಯ ಅಖಾರ ಪರಿಷತ್ತಿನ ಅಧ್ಯಕ್ಷರಾದ ಮಹಾಂತ್ ನರೇಂದ್ರ ಗಿರಿ ಅವರ ಸಾವು ಆಧ್ಯಾತ್ಮಿಕ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ಅಗಲಿದ ಅವರ ಆತ್ಮಕ್ಕೆ ಅವರ ಪಾದದಲ್ಲಿ ಸ್ಥಾನ ಮತ್ತು ಶಕ್ತಿಯನ್ನು ನೀಡಬೇಕೆಂದು ಭಗವಾನ್ ಶ್ರೀರಾಮನನ್ನು ಪ್ರಾರ್ಥಿಸುತ್ತೇನೆ. ಅವರ ಅಗಲಿಕೆ ದುಃಖವನ್ನು ಸಹಿಸಿಕೊಳ್ಳಲು ಅವರ ಅನುಯಾಯಿಗಳಿಗೆ ಆ ದೇವರು ಶಕ್ತಿ ನೀಡಲಿ ಎಂದು ಹೇಳಿದ್ದಾರೆ.
ಸೂಕ್ತ ತನಿಖೆಗೆ ಭಕ್ತರಿಂದ ಆಗ್ರಹ
ಇನ್ನು ನರೇಂದ್ರ ಗಿರಿ ಅವರ ನಿಧನದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಅವರ ಬೆಂಬಲಿಗರು ಮತ್ತು ಭಕ್ತರು ಆಗ್ರಹಿಸಿದ್ದಾರೆ. ಮಹಾಂತ ನರೇಂದ್ರ ಗಿರಿ ಅವರು ಪ್ರಭಾವಿ ವ್ಯಕ್ತಿಯಾಗಿದ್ದರಿಂದ ಅವರ ಸಾವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮಹಾಂತ ನರೇಂದ್ರ ಗಿರಿ ಅವರು 2016 ರಲ್ಲಿ ಮಹಾಂತ್ ಜ್ಞಾನ ದಾಸ್ ಅವರನ್ನು ಬದಲಿಸಿದ ನಂತರ ಅಖಿಲ ಭಾರತೀಯ ಅಖಾರ ಪರಿಷತ್ತಿನ ಮುಖ್ಯಸ್ಥರಾದರು. ಕೋವಿಡ್ -19 ಸೋಂಕಿಗೆ ಒಳಗಾದ ನಂತರ ಅವರನ್ನು ಈ ವರ್ಷ ಏಪ್ರಿಲ್‌ನಲ್ಲಿ ರಿಷಿಕೇಶದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ಗೆ ದಾಖಲಿಸಲಾಗಿತು. ಬಳಿಕ ಅವರ ಚೇತರಿಕೆ ಹಿನ್ನಲೆಯಲ್ಲಿ ಡಿಸ್ಚಾರ್ಜ್ ಮಾಡಲಾಗಿತ್ತು.
ಗಣ್ಯರ ಸಂತಾಪ
ಆಚಾರ್ಯ ನರೇಂದ್ರ ಗಿರಿ ಅವರ ನಿಧನಕ್ಕೆ ಸಿಎಂ ಯೋದಿ ಆದಿತ್ಯಾನಾಥ್ ಅವರಲ್ಲದೇ ಇತರೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದು, ಮಹಂತ್ ನರೇಂದ್ರ ಗಿರಿ ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಆಧ್ಯಾತ್ಮಿಕ ನಾಯಕನ ನಿಧನಕ್ಕೆ ಸಂತಾಪ ಸೂಚಿಸುತ್ತೇನೆ. ಸಮಾಜಕ್ಕೆ ಅವರ ಕೊಡುಗೆಗಳು ಪ್ರಶಂಸನೀಯ ಎಂದು ಹೇಳಿದ್ದಾರೆ.
ಅಂತೆಯೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಆಧ್ಯಾತ್ಮಿಕ ನಾಯಕನ ನಿಧನಕ್ಕೆ ಸಂತಾಪ ಸೂಚಿಸಿದ್ದು, ಟ್ವಿಟ್ಟರ್‌ನಲ್ಲಿ ನರೇಂದ್ರ ಗಿರಿಯ ಸಾವನ್ನು 'ತುಂಬಲಾರದ ನಷ್ಟ' ಎಂದು ಯಾದವ್ ಬಣ್ಣಿಸಿದ್ದಾರೆ.