ಜಾತಕ ಹೊಂದಾಣಿಕೆಯಾಗುತ್ತಿಲ್ಲ ಎಂಬ ನೆಪವೊಡ್ಡಿ ಮದುವೆಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ: ಮುಂಬೈ ಹೈಕೋರ್ಟ್

ಜ್ಯೋತಿಷ್ಯದಲ್ಲಿ ಜಾತಕ ಹೊಂದಿಕೆಯಾಗುವುದಿಲ್ಲ ಎಂದು ಹೇಳಿ ಸಂಬಂಧ ಹೊಂದಿದ್ದ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ 32 ವರ್ಷದ ಯುವಕನ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಕೇಸಿನಿಂದ ಮುಕ್ತಿ ನೀಡಲು ಮುಂಬೈ ಹೈಕೋರ್ಟ್ ನಿರಾಕರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಜ್ಯೋತಿಷ್ಯದಲ್ಲಿ ಜಾತಕ ಹೊಂದಿಕೆಯಾಗುವುದಿಲ್ಲ ಎಂದು ಹೇಳಿ ಸಂಬಂಧ ಹೊಂದಿದ್ದ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ 32 ವರ್ಷದ ಯುವಕನ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಕೇಸಿನಿಂದ ಮುಕ್ತಿ ನೀಡಲು ಮುಂಬೈ ಹೈಕೋರ್ಟ್ ನಿರಾಕರಿಸಿದೆ.

ನ್ಯಾಯಮೂರ್ತಿ ಎಸ್ ಕೆ ಶಿಂಧೆ ಅವರ ನೇತೃತ್ವದ ಏಕಸದಸ್ಯ ಪೀಠ ಅವಿಶೇಕ್ ಮಿತ್ರ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು. ಯುವತಿ ನೀಡಿದ ದೂರಿನ ಆಧಾರದ ಮೇಲೆ ಮುಂಬೈ ಉಪನಗರ ಬೊರಿವಾಲಿ ಪೊಲೀಸರು ದಾಖಲಿಸಿದ್ದ ಅತ್ಯಾಚಾರ ಮತ್ತು ವಂಚನೆ ಕೇಸಿನಿಂದ ಮುಕ್ತಿ ನೀಡುವಂತೆ ಅವಿಶೇಕ್ ಮಿತ್ರ ಅರ್ಜಿ ಸಲ್ಲಿಸಿದ್ದ.

ಜಾತಕದಲ್ಲಿ ಹೊಂದಿಕೆಯಾಗುವುದಿಲ್ಲ ಹೀಗಾಗಿ ಸತಿ-ಪತಿಗಳಾಗಿ ಸಂಬಂಧ ಮುಂದುವರಿಸಲು ಸಾಧ್ಯವಿಲ್ಲ ಎಂದು ಮಿತ್ರ ಪರ ವಕೀಲ ರಾಜ ಥ್ಯಾಕರೆ ಕೋರ್ಟ್ ನಲ್ಲಿ ವಾದ ಮಂಡಿಸಿದರು. ಇದು ಮದುವೆಯ ನೆಪದಲ್ಲಿ ವಂಚನೆ ಮತ್ತು ಅತ್ಯಾಚಾರ ಪ್ರಕರಣವಲ್ಲ, ಭರವಸೆಯ ಉಲ್ಲಂಘನೆಯ ಪ್ರಕರಣ ಎಂದು ಮಿತ್ರ ಪರ ವಕೀಲರು ವಾದ ಮಂಡಿಸಿದ್ದರು.

ಆದರೆ, ನ್ಯಾಯಮೂರ್ತಿ ಶಿಂಧೆ, ಈ ವಾದವನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ದೂರುದಾರ ಯುವತಿಯನ್ನು ಮದುವೆಯಾಗುವ ಭರವಸೆಯನ್ನು ಯುವಕ ಆರಂಭದಲ್ಲಿ ಹೊಂದಿದ್ದ ಎಂದು ತೋರಿಸಲು ಯಾವುದೇ ಸಾಕ್ಷಿಗಳಿಲ್ಲ. ಜಾತಕದಲ್ಲಿ ಹೊಂದಿಕೆಯಾಗುವುದಿಲ್ಲ ಎಂಬುದು ಕುಂಟು ನೆಪವಷ್ಟೆ. . ಹೀಗಾಗಿ, ಇದು ಮದುವೆಯಾಗುವುದಾಗಿ ನಂಬಿಸಿ ವಂಚಿಸಿರುವುದು ಸ್ಪಷ್ಟವಾಗುತ್ತಿದೆ ಎಂದು ಹೇಳಿ ಅರ್ಜಿ ತಿರಸ್ಕರಿಸಿದರು.

ನ್ಯಾಯಾಧೀಶ ಶಿಂಧೆ ಅವರು ಮೇಲ್ನೋಟಕ್ಕೆ ನ್ಯಾಯಾಲಯದ ಅಭಿಪ್ರಾಯವನ್ನು ಗಮನಿಸಿದರು, ಮಿತ್ರ ದೂರುದಾರರಿಗೆ ತನ್ನ ವಿರುದ್ಧದ ಪ್ರಕರಣವನ್ನು ತಪ್ಪಿಸಲು ಪೋಲಿಸರನ್ನು ಸಂಪರ್ಕಿಸಿದಾಗ ತಾನು ಅವಳನ್ನು ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿದ್ದಾನೆ ಎಂಬುದು ಗೊತ್ತಾಗುತ್ತದೆ ಎಂದರು.

ಇಲ್ಲಿ ಆರೋಪಿ ಮಿತ್ರ ಮತ್ತು ಯುವತಿ 2012ರಿಂದಲೂ ಪರಿಚಯ, ಫೈವ್ ಸ್ಟಾರ್ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಪರಸ್ಪರ ಪರಿಚಯವಾಗಿ ಪ್ರೀತಿಸತೊಡಗಿದರು. ನಂತರ ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿ ಯುವಕ ಮಿತ್ರ ಯುವತಿ ಜೊತೆ ಆಗಾಗ ಶಾರೀರಿಕ ಸಂಬಂಧ ಬೆಳೆಸಿದ್ದ. ಈ ಸಂದರ್ಭದಲ್ಲಿ ಗರ್ಭವತಿಯಾದ ಆಕೆ ಮದುವೆ ಮಾಡಿಕೊಳ್ಳೋಣ ಎಂದು ಯುವಕನಿಗೆ ಕೇಳಿದಳು. 

ಆಗ ಯುವಕ ನಾವಿನ್ನೂ ವಯಸ್ಸಿನಲ್ಲಿ ಚಿಕ್ಕವರಾಗಿದ್ದು ಈಗಲೇ ಮದುವೆಯಾಗಲು ಸಾಧ್ಯವಿಲ್ಲ, ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದನು. 2012ರ ಡಿಸೆಂಬರ್ ನಲ್ಲಿ ಯುವಕ ಯುವತಿಯಿಂದ ದೂರವಿರಲು ಪ್ರಯತ್ನಿಸಿದನು, ಆಗ ಅವಳು ಪೊಲೀಸ್ ದೂರು ನೀಡಿದಳು.

ಪೊಲೀಸರು ಮಿತ್ರನನ್ನು ಕರೆದು ವಿಚಾರಣೆ ನಡೆಸಿದಾಗ 2013ರ ಜನವರಿಯಲ್ಲಿ ಆಕೆಯನ್ನು ಮದುವೆ ಮಾಡಿಕೊಳ್ಳುವುದಾಗಿ ಪೊಲೀಸರ ಮುಂದೆ ಭರವಸೆ ನೀಡಿದನು.ಆದರೆ ಕೆಲ ದಿನಗಳ ನಂತರ ಮತ್ತೆ ತನ್ನ ವರಸೆ ಬದಲಿಸಿದನು, ಆಗ ಯುವತಿ ದೂರು ನೀಡಿದಾಗ ಆತನ ವಿರುದ್ಧ ವಂಚನೆ ಮತ್ತು ಅತ್ಯಾಚಾರ ಕೇಸು ದಾಖಲಿಸಿಕೊಂಡರು.

ಮಿತ್ರನ ಉದ್ದೇಶ ಪ್ರಾಮಾಣಿಕವಾಗಿದ್ದರೆ ಮದುವೆ ವಿಚಾರದಿಂದ ಹಿಂದೆ ಸರಿಯುತ್ತಿರಲಿಲ್ಲ ಎಂದು ನ್ಯಾಯಪೀಠ ಹೇಳಿ ಅರ್ಜಿ ತಿರಸ್ಕೃತಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com