Online Desk
ಕೊಲ್ಕತ್ತಾ: ಕೆಲವೇ ದಿನಗಳಲ್ಲಿ ಬಿಜೆಪಿಯಿಂದ ದೊಡ್ಡ ನಾಯಕರೊಬ್ಬರು ಟಿಎಂಸಿ ಸೇರ್ಪಡೆಗೆ ವೇದಿಕೆ ಸಜ್ಜಾಗಿದೆ ಎಂದು ಹಿರಿಯ ತೃಣಮೂಲ ಕಾಂಗ್ರೆಸ್ ಮುಖಂಡ ಫಿರ್ಹಾದ್ ಹಕೀಂ ಗುರುವಾರ ತಿಳಿಸಿದ್ದಾರೆ. ಕೇಸರಿ ಪಕ್ಷ ರಾಜ್ಯದಲ್ಲಿ ವಿಭಜನೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಸೆಪ್ಟೆಂಬರ್ 30 ರ ಬಾಭನಿಪುರ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪರವಾಗಿ ಪ್ರಚಾರದಲ್ಲಿ ನಿರತರಾಗಿದ್ದ ಹಕೀಂ, ಪಕ್ಷವು ಬಿಜೆಪಿ ನಾಯಕರನ್ನು ಮನಬಂದಂತೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸುವುದು ನನ್ನ ವಿಧಿ, ಬಿಜೆಪಿ ಹೊರಗಿನವರನ್ನು ಕರೆತಂದು ಅವಾಂತರ ಸೃಷ್ಟಿಸುತ್ತಿದೆ: ಮಮತಾ ಬ್ಯಾನರ್ಜಿ
ಟಿಎಂಸಿಗೆ ಸೇರ್ಪಡೆಯಾಗಬಯಸುವ ಬಿಜೆಪಿ ನಾಯಕರ ಪೂರ್ವಪರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಮಾತುಕತೆಯ ನಂತರ ಅವರ ಮನವಿ ಬಗ್ಗೆ ನಿರ್ಧರಿಸಲಾಗುತ್ತಿದೆ ಎಂದು ಬ್ಯಾನರ್ಜಿ ಸಂಪುಟದ ಹಿರಿಯ ಸಚಿವರು ಆಗಿರುವ ಹಕ್ಕೀಂ ತಿಳಿಸಿದರು.
ಬ್ಯಾನರ್ಜಿ ನೇತೃತ್ವದಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಅಧಿಕಾರಕ್ಕೆ ಬಂದ ನಂತರ ಪಶ್ಚಿಮ ಬಂಗಾಳದಲ್ಲಿ ಹಲವು ಬಿಜೆಪಿ ನಾಯಕರು ಟಿಎಂಸಿಗೆ ಸೇರ್ಪಡೆಯಾಗುತ್ತಿದ್ದಾರೆ.
ಮುಕುಲ್ ರಾಯ್ ಹಾಗೂ ಬಾಬುಲ್ ಸುಪ್ರಿಯೋ ಬಿಜೆಪಿಯಿಂದ ಟಿಎಂಸಿ ಸೇರ್ಪಡೆಯಾದ ನಂತರ ಮತ್ತಷ್ಟು ಮಂದಿ ಬಿಜೆಪಿಯಿಂದ ಬರುವ ಕುರಿತಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಹಕ್ಕೀಂ ಕೆಲ ದಿನಗಳವರೆಗೂ ಕಾಯಿರಿ, ಬಿಜೆಪಿಯ ದೊಡ್ಡ ನಾಯಕರೊಬ್ಬರು ಟಿಎಂಸಿಗೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿಸಿದರು. ಆದರೆ, ಹೆಚ್ಚಿನ ವಿವರ ಬಹಿರಂಗಪಡಿಸಲು ನಿರಾಕರಿಸಿದರು.