ಭಾರತವನ್ನು ಜಾಗತಿಕ ಇನ್ನೊವೇಷನ್ ಹಬ್ ಮಾಡುವ ಗುರಿ ಇದೆ: CEO ಗಳ ಸಭೆಯಲ್ಲಿ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಗುರುವಾರ ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕದ ಉನ್ನತ ತಂತ್ರಜ್ಞಾನ ಕಂಪನಿಗಳ ಸಿಇಒಗಳನ್ನು ಭೇಟಿ ಮಾಡಿದ್ದು, ಈ ವೇಳೆ ಭಾರತವನ್ನು ಜಾಗತಿಕ ಇನ್ನೋವೇಷನ್ ಹಬ್ ಮಾಡುವ ಗುರಿ ಇದೆ ಎಂದು ಹೇಳಿದರು.
ಸಿಇಒ ಸಭೆಗೂ ಮುನ್ನ ಅನಿವಾಸಿ ಭಾರತೀಯರ ಭೇಟಿ ಮಾಡಿದ ಪ್ರಧಾನಿ ಮೋದಿ
ಸಿಇಒ ಸಭೆಗೂ ಮುನ್ನ ಅನಿವಾಸಿ ಭಾರತೀಯರ ಭೇಟಿ ಮಾಡಿದ ಪ್ರಧಾನಿ ಮೋದಿ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಗುರುವಾರ ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕದ ಉನ್ನತ ತಂತ್ರಜ್ಞಾನ ಕಂಪನಿಗಳ ಸಿಇಒಗಳನ್ನು ಭೇಟಿ ಮಾಡಿದ್ದು, ಈ ವೇಳೆ ಭಾರತವನ್ನು ಜಾಗತಿಕ ಇನ್ನೋವೇಷನ್ ಹಬ್ ಮಾಡುವ ಗುರಿ ಇದೆ ಎಂದು ಹೇಳಿದರು.

ಅಮೆರಿಕ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಸಿಇಒಗಳನ್ನು ಭೇಟಿಯಾಗಿದ್ದಾರೆ. ಭಾರತದಲ್ಲಿ 5 ಜಿ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಲು ಪ್ರಮುಖ ಸಂಸ್ಥೆ ಕ್ವಾಲ್‌ಕಾಮ್ ಆಸಕ್ತಿ ತೋರಿದೆ. ಸೆಮಿಕಂಡಕ್ಟರ್ ಮತ್ತು ವೈರ್‌ಲೆಸ್ ಟೆಕ್ನಾಲಜಿ ತಯಾರಕ ಕ್ವಾಲ್‌ಕಾಮ್, ಸಾಫ್ಟ್‌ವೇರ್ ಕಂಪನಿ ಅಡೋಬ್, ಪುನರ್ ನವೀಕರಿಸಬಹುದಾದ ಇಂಧನ ಕಂಪನಿ ಫಸ್ಟ್ ಸೋಲಾರ್, ಶಸ್ತ್ರಾಸ್ತ್ರ ತಯಾರಕ ಜನರಲ್ ಅಟೊಮಿಕ್ಸ್ ಮತ್ತು ಹೂಡಿಕೆ ನಿರ್ವಹಣಾ ಕಂಪನಿ ಬ್ಲ್ಯಾಕ್‌ಸ್ಟೋನ್ ಸಿಇಒಗಳೊಂದಿಗೆ ಪರಸ್ಪರ ಚರ್ಚೆ, ಮಾತುಕತೆಯಲ್ಲಿ ಮೋದಿ ತೊಡಗಿದ್ದರು.

ಮೊದಲಿಗೆ ಕ್ವಾಲ್‌ಕಾಮ್ ಅಧ್ಯಕ್ಷ ಮತ್ತು ಸಿಇಒ ಕ್ರಿಸ್ಟಿಯಾನೋ ಅಮೋನ್ ರೊಂದಿಗೆ ಮೋದಿ ಮಾತುಕತೆ ನಡೆಸಿದರು. ಭಾರತದಲ್ಲಿ 5G ತಂತ್ರಜ್ಞಾನ ತ್ವರಿತ ಗತಿಯಲ್ಲಿ ಅಳವಡಿಕೆ ಮತ್ತು ಸುರಕ್ಷಿತ ನೆಟ್ವರ್ಕ್ ಗಳನ್ನು ಒದಗಿಸಬಲ್ಲ ವಿಶ್ವಾಸಾರ್ಹ ಪಾಲುದಾರರನ್ನು ಸರ್ಕಾರ ಎದುರು ನೋಡುತ್ತಿದೆ. ಈ ಉನ್ನತ ತಂತ್ರಜ್ಞಾನದ ಕ್ಷೇತ್ರದಲ್ಲಿ ಹೂಡಿಕೆ ಅಗತ್ಯ ಹೆಚ್ಚಿದೆ. ಸ್ಯಾನ್ ಡಿಯಾಗೋ ಮೂಲದ ಈ ಕಂಪನಿಯು ವೈರ್‌ಲೆಸ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸೆಮಿಕಂಡಕ್ಟರ್‌ಗಳು, ಸಾಫ್ಟ್‌ವೇರ್ ಮತ್ತು ಸೇವೆಗಳನ್ನು ನೀಡುತ್ತಿದೆ ಮತ್ತು ಪ್ರವರ್ತಕ ಉತ್ಪನ್ನಗಳ ಶ್ರೇಣಿಯೊಂದಿಗೆ 5G ತಂತ್ರಜ್ಞಾನ ಒದಗಿಸಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ.

ಕ್ವಾಲ್ಕಾಮ್ ಮುಖ್ಯಸ್ಥರ ಹೊರತಾಗಿ, ಪ್ರಧಾನ ಮಂತ್ರಿ ಮೋದಿ ಅವರು ಅಡೋಬ್, ಬ್ಲ್ಯಾಕ್‌ಸ್ಟೋನ್, ಜನರಲ್ ಅಟೊಮಿಕ್ಸ್ ಮತ್ತು ಫಸ್ಟ್ ಸೋಲಾರ್ ಸಂಸ್ಥೆಗಳ ಸಿಇಒಗಳೊಂದಿಗೆ ಚರ್ಚೆ ನಡೆಸದ್ದಾರೆ ಎನ್ನಲಾಗಿದೆ.

ಅಂತೆಯೇ ಸಿಇಒಗಳ ಜೊತೆಗಿನ ಸಭೆಯಲ್ಲಿ  5 ಜಿ, ಸ್ಟಾರ್ಟ್ ಅಪ್ ಮತ್ತು ಡಿಜಿಟಲ್ ಇಂಡಿಯಾ ಸೇರಿದಂತೆ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಶಾಲ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಚರ್ಚಿಸಿದರು ಎಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ. ಕ್ವಾಲ್ಕಾಮ್‌ನ ಅಧ್ಯಕ್ಷ ಮತ್ತು ಸಿಇಒ ಕ್ರಿಸ್ಟಿಯಾನೊ ಆರ್ ಅಮೋನ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು ಎಂದು ಪಿಎಂಒ ಹೇಳಿದೆ.

ಈ ನಡುವೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಯು ಯುಎಸ್ ಸೋಲಾರ್ ಟೆಕ್ನಾಲಜಿ ಕಂಪನಿಯ ಫಸ್ಟ್ ಸೋಲಾರ್‌ನ ಸಿಇಒ ಮಾರ್ಕ್ ವಿದ್ಮಾರ್ ಅವರನ್ನು ಭೇಟಿ ಮಾಡಿದ ಬಗ್ಗೆ ಟ್ವೀಟ್ ಮಾಡಿದೆ.

'ಇದೊಂದು ಉತ್ತಮ ಸಭೆ.ಭಾರತದ ಜೊತೆಗಿನ ಪಾಲುದಾರಿಕೆಯ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ನಾವು 5 ಜಿ ಮತ್ತು ಅದರ ವೇಗವರ್ಧನೆಯ ಬಗ್ಗೆ ಮಾತನಾಡಿದ್ದೇವೆ. ನಾವು ಭಾರತದಲ್ಲಿ ಮಾತ್ರವಲ್ಲದೆ ಭಾರತವನ್ನು ತಂತ್ರಜ್ಞಾನದ ರಫ್ತುದಾರರಾಗಿ ಉದ್ಯಮವನ್ನು ಮುನ್ನಡೆಸಲು ಇರುವ ಅವಕಾಶದ ಬಗ್ಗೆ ಮಾತನಾಡಿದ್ದೇವೆ. ನಾವು ಸೆಮಿಕಂಡಕ್ಟರ್‌ಗಳ ಬಗ್ಗೆ ಮಾತನಾಡಿದ್ದೇವೆ. ಇದು ಚರ್ಚೆಯ ಪ್ರಮುಖ ವಿಷಯವಾಗಿದೆ. ಭಾರತದಲ್ಲಿನ ಮೊಬೈಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಅವಕಾಶದ ಕುರಿತು ನಾವು ಮಾತನಾಡಿದ್ದೇವೆ. ನಾವು ಭಾರತದೊಂದಿಗೆ ಜೊತೆಯಾಗಿ ಮಾಡುತ್ತಿರುವ ಕಾರ್ಯದ ವಿಚಾರದಲ್ಲಿ ನಮಗೆ ಸಂತೋಷವಾಗಿದೆ ಎಂದು ಅಮೋನ್ ಅವರು ಹೇಳಿದರು.

ಉನ್ನತ ಮಟ್ಟದ ಸಭೆಗಳು ಹೊಸ ಟೆಕ್ ಪ್ರದೇಶದಲ್ಲಿ ದೊಡ್ಡ ಹೂಡಿಕೆಗೆ ದಾರಿ ಮಾಡಿಕೊಡುತ್ತದೆ ಎಂದು ನಿರೀಕ್ಷಿಸಲಾಗಿದೆ, ಇದು ದೇಶದ ನಾಗರಿಕರಿಗೆ ಮುಂದಿನ ಪೀಳಿಗೆಯ ನೆಟ್‌ವರ್ಕಿಂಗ್ ಸೇವೆಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಯುವಕರಿಗೆ ಸ್ಮಾರ್ಟ್ ಶಿಕ್ಷಣವನ್ನು ನೀಡಲು ಮತ್ತು ಸಂಶೋಧನೆಯನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವುದರ ಬಗ್ಗೆ ಅಡೋಬ್‌ನ ಅಧ್ಯಕ್ಷಮತ್ತು ಸಿಇಒ ಶಂತನು ನಾರಾಯಣ್ ಅವರೊಂದಿಗಿನ ಮೋದಿ ಚರ್ಚಿಸಿದರು. ಭಾರತೀಯ ಯುವಜನರಿಂದ ನಡೆಸಲ್ಪಡುವ ಭಾರತದ ಸ್ಟಾರ್ಟ್ ಅಪ್ ವಲಯದ ಬಗ್ಗೆಯೂ ಚರ್ಚಿಸಿದರು ಎಂದು ಟ್ವೀಟ್ ಮಾಡಿದ್ದಾರೆ.

ನಾಳೆ ಬೈಡನ್-ಮೋದಿ ಚರ್ಚೆ
ಅಂತೆಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜೊತೆ ನಾಳೆ ಶ್ವೇತಭವನದಲ್ಲಿ ಭೇಟಿಯಾಗಲಿದ್ದಾರೆ. ಸೆಪ್ಟೆಂಬರ್‌ 25 ರಂದು ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ (ಯುಎನ್ ಜಿಎ) 76ನೇ ಅಧಿವೇಶನದ ಉನ್ನತ ಮಟ್ಟದ ವಿಭಾಗದ ಸಾಮಾನ್ಯ ಚರ್ಚೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹವಾಮಾನ ಬದಲಾವಣೆ, ಭಯೋತ್ಪಾದನೆ ಹಾಗೂ ಕೊರೊನಾ ವೈರಸ್‌ ಸಾಂಕ್ರಾಮಿಕ ಸೇರಿದಂತೆ ಜಾಗತಿಕ ಸಮಸ್ಯೆಗಳ ಬಗ್ಗೆ ಮಾತನಾಡಲಿದ್ದಾರೆ.

2014ರಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರವಹಿಸಿಕೊಂಡ ಬಳಿಕ 7ನೇ ಬಾರಿಗೆ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. 2015ರಲ್ಲಿ ಭಾರತ-ಅಮೆರಿಕ ಸಮಯದಾಯದ ಕಾರ್ಯಕ್ರಮ, ಬಳಿಕ ಸಿಲಿಕಾನ್ ವ್ಯಾಲಿ ಭೇಟಿ ಕೈಗೊಂಡಿದ್ದರು. 2019ರಲ್ಲಿ ಹೌಡಿ-ಮೋಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com