4 ವಾರಗಳ ನಂತರ ಕೋವಿಶೀಲ್ಡ್ 2ನೇ ಡೋಸ್ ಗೆ ಅನುಮತಿ: ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ಕೇರಳ ಹೈಕೋರ್ಟ್ ನಕಾರ
ನಾಲ್ಕು ವಾರಗಳ ನಂತರ ಕೋವಿಶೀಲ್ಡ್ ಲಸಿಕೆಯ 2ನೇ ಡೋಸ್ ಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ್ದ ಕೇರಳ ಹೈಕೋರ್ಟ್ ಏಕ ಸದ್ಯಸ ಪೀಠದ ಆದೇಶಕ್ಕೆ ತಡೆ ನೀಡಲು ವಿಭಾಗೀಯ ಪೀಠ ಸೋಮವಾರ ನಿರಾಕರಿಸಿದೆ.
Published: 27th September 2021 05:50 PM | Last Updated: 27th September 2021 06:12 PM | A+A A-

ಕೋವಿಶೀಲ್ಡ್ ಲಸಿಕೆ ಚಿತ್ರ
ಕೊಚ್ಚಿ: ನಾಲ್ಕು ವಾರಗಳ ನಂತರ ಕೋವಿಶೀಲ್ಡ್ ಲಸಿಕೆಯ 2ನೇ ಡೋಸ್ ಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ್ದ ಕೇರಳ ಹೈಕೋರ್ಟ್ ಏಕ ಸದ್ಯಸ ಪೀಠದ ಆದೇಶಕ್ಕೆ ತಡೆ ನೀಡಲು ವಿಭಾಗೀಯ ಪೀಠ ಸೋಮವಾರ ನಿರಾಕರಿಸಿದೆ.
ಪ್ರಸ್ತುತ 84 ದಿನಗಳ ನಂತರವೇ ಕೋವಿಶೀಲ್ಡ್ ಲಸಿಕೆ ಪಡೆಯಲು ಅವಕಾಶ ಇದೆ. ಆದರೆ 4 ವಾರಗಳ ನಂತರ ಕೋವಿಶೀಲ್ಡ್ ಲಸಿಕೆ ಪಡೆಯಲು ಅನುಮತಿ ನೀಡುವಂತೆ ಹೈಕೋರ್ಟ್ ಏಕ ಸದಸ್ಯ ಪೀಠ ನೀಡಿದ ಆದೇಶ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ ಮತ್ತು ಮುಂದಿನ ಗುರುವಾರ ಪ್ರಕರಣದ ವಿಚಾರಣೆ ಮುಂದೂಡಿದೆ.
ಇದನ್ನು ಓದಿ: 66 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಖರೀದಿಗೆ ಕೇಂದ್ರ ಸರ್ಕಾರ ಆದೇಶ- ಮೂಲಗಳು
ಏಕ ಸದಸ್ಯ ಪೀಠದ ತೀರ್ಪಿಗೆ ತಡೆ ನೀಡದಿದ್ದರೆ ಕೋವಿಡ್ -19 ವಿರುದ್ಧ ಹೋರಾಡುವ ಕೇಂದ್ರ ಸರ್ಕಾರದ ಕಾರ್ಯತಂತ್ರದ ಅನುಷ್ಠಾನದಲ್ಲಿ ಅಸ್ವಸ್ಥತೆ ಉಂಟಾಗುತ್ತದೆ ಎಂದು ಕೇಂದ್ರ ಸರ್ಕಾರದ ವಕೀಲರು ವಾದಿಸಿದರು.
ನಿಗದಿತ 84 ದಿನಗಳಿಗೂ ಮುನ್ನ 10000 ಕ್ಕೂ ಹೆಚ್ಚು ಕಾರ್ಮಿಕರಿಗೆ ಎರಡು ಡೋಸ್ ಲಸಿಕೆ ಹಾಕಿಸಲು ಅನುಮತಿ ಕೋರಿ ಕಿಟಕ್ಸ್ ಗಾರ್ಮೆಂಟ್ಸ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ, ಕೇಂದ್ರ ಸರ್ಕಾರ ವಿದೇಶಕ್ಕೆ ಹೋಗಬೇಕಾದ ಕೆಲವು ವರ್ಗಗಳ ವ್ಯಕ್ತಿಗಳಿಗೆ ಲಸಿಕೆ ಅಂತರವನ್ನು ಸಡಿಲಗೊಳಿಸಿದೆ ಎಂಬ ಆಧಾರದ ಮೇಲೆ 4 ವಾರಗಳ ನಂತರ ಎರಡನೇ ಡೋಸ್ ಗೆ ಅನುಮತಿ ನೀಡಿ ಎಂದು ಕೇಂದ್ರಕ್ಕೆ ನಿರ್ದೇಶನ ನೀಡಿತ್ತು.