ಪಶ್ಚಿಮ ಬಂಗಾಳ: ಭವಾನಿಪುರ ಉಪ ಚುನಾವಣೆ ಮತದಾನ; ಸಿಎಂ ಮಮತಾಗೆ 'ಮಾಡು ಇಲ್ಲವೇ ಮಡಿ' ಪರಿಸ್ಥಿತಿ

ಪಶ್ಚಿಮ ಬಂಗಾಳದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಉಪಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಿಎಂ ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಹಾಲಿ ಚುನಾವಣೆ 'ಮಾಡು ಇಲ್ಲವೇ ಮಡಿ' ಎಂಬಂತಾಗಿದೆ.
ಸಿಎಂ ಮಮತಾ ಬ್ಯಾನರ್ಜಿ
ಸಿಎಂ ಮಮತಾ ಬ್ಯಾನರ್ಜಿ

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಉಪಚುನಾವಣೆಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಿಎಂ ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಹಾಲಿ ಚುನಾವಣೆ 'ಮಾಡು ಇಲ್ಲವೇ ಮಡಿ' ಎಂಬಂತಾಗಿದೆ.

ಹೌದು.. ನಾನಾ ಕಾರಣಗಳಿಂದಾಗಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಭವಾನಿಪುರ ಉಪಚುನಾವಣೆಯ ಮತದಾನ ಇಂದು ಬೆಳಗ್ಗೆಯಿಂದ ಆರಂಭವಾಗಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಈ ಉಪ ಚುನಾವಣೆಯು ತೀವ್ರ ಮಹತ್ವ ಪಡೆದುಕೊಂಡಿದೆ.

ಟಿಎಂಸಿ-ಬಿಜೆಪಿ ಕಾರ್ಯಕರ್ತರ ಘರ್ಷಣೆ ಶಂಕೆ ಮೇರೆಗೆ ತೀವ್ರ ಭದ್ರತೆಯೊಂದಿಗೆ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಬೆಳಗ್ಗೆ 9  ಗಂಟೆಯವರೆಗೂ ಶೇ.7.57ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಅಂತೆಯೇ ಮತದಾನ ಆರಂಭವಾದ ಮೊದಲ ಎರಡು ಗಂಟೆಗಳಲ್ಲಿ ಮುರ್ಷಿದಾಬಾದ್ ಜಿಲ್ಲೆಯ ಸಂಸರ್‌ಗಂಜ್ ಮತ್ತು ಜಂಗೀಪುರ ಕ್ಷೇತ್ರಗಳಲ್ಲಿ ಶೇ.16.32 ಮತ್ತು  ಶೇ.17.51 ಮತದಾನವಾಗಿತ್ತು ಎಂದು ಎಂದು ತಿಳಿದುಬಂದಿದೆ.

ಭವಾನಿಪುರ, ಸಂಸರ್‌ಗಂಜ್ ಮತ್ತು ಜಂಗೀಪುರ ಕ್ಷೇತ್ರಗಳಲ್ಲಿ ಒಟ್ಟು 6,97,164 ಮಂದಿ ಮತದಾರರಿದ್ದು, ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. 

ಸಿಎಂ ಮಮತಾಗೆ 'ಮಾಡು ಇಲ್ಲವೇ ಮಡಿ' ಪರಿಸ್ಥಿತಿ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಿಂದ ಸ್ಪರ್ಧಿಸಿದ್ದ ಮಮತಾ ಅವರು ಸುವೇಂದು ಅಧಿಕಾರಿ ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. ಆ ಹಿನ್ನೆಲೆಯಲ್ಲಿ ಮಮತಾ ಉಪ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಭವಾನಿಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. 2011 ಮತ್ತು 2016ರ ವಿಧಾನಸಭೆ ಚುನಾವಣೆಗಳಲ್ಲಿ ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಮತಾ ಗೆಲುವು ಸಾಧಿಸಿದ್ದರು. ಸೆ.30ರಂದು ನಡೆಯುತ್ತಿರುವ ಉಪಚುನಾವಣೆಯಲ್ಲಿ ಮಮತಾ ವಿರುದ್ಧ ಅಭ್ಯರ್ಥಿಯನ್ನು ಹಾಕದಿರಲು ಕಾಂಗ್ರೆಸ್‌ ನಿರ್ಧರಿಸಿದೆ. 

ಅಕ್ಟೋಬರ್‌ 3ರಂದು ಫಲಿತಾಂಶ ಪ್ರಕಟವಾಗಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com