ಬಿಜೆಪಿಯಲ್ಲಿ ದುರಹಂಕಾರ ತುಂಬಿದೆ: ಎಎಪಿಗೆ ಒಂದು ಅವಕಾಶ ಕೊಡಿ, ಗುಜರಾತ್ ನಲ್ಲಿ ಕೇಜ್ರಿವಾಲ್ ಪ್ರಚಾರ!
ಪಂಜಾಬ್ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಹುಮ್ಮಸ್ಸಿನಲ್ಲಿರೋ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಇದೀಗ ಗುಜರಾತ್ ಮೇಲೆ ಕಣ್ಣಿಟ್ಟಿದೆ.
Published: 02nd April 2022 08:22 PM | Last Updated: 02nd April 2022 08:22 PM | A+A A-

ಅರವಿಂದ್ ಕೇಜ್ರಿವಾಲ್
ಅಹಮದಾಬಾದ್: ಪಂಜಾಬ್ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಹುಮ್ಮಸ್ಸಿನಲ್ಲಿರೋ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಇದೀಗ ಗುಜರಾತ್ ಮೇಲೆ ಕಣ್ಣಿಟ್ಟಿದೆ.
ಪಂಜಾಬರ ನೆಲದಲ್ಲಿ ಗೆಲುವಿನ ನಗೆ ಬೀರಿದ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ಗುಜರಾತ್‌ನತ್ತ ಕಣ್ಣಿಟ್ಟಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ಅರವಿಂದ ಕೇಜ್ರಿವಾಲ್ ಅಹಮದಾಬಾದ್ ಗೆ ಭೇಟಿ ನೀಡಿದ್ದು ಪ್ರಚಾರ ಮಾಡ್ತಿದ್ದಾರೆ.
ತಿರಂಗ ಯಾತ್ರೆಯ ಪ್ರಚಾರದಲ್ಲಿ ರೋಡ್ ಶೋ ಮಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 'ಎಎಪಿಗೆ ಒಂದು ಅವಕಾಶ ನೀಡಿ' ಎಂದು ಕೇಳಿಕೊಳ್ಳುವ ಮೂಲಕ ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಮುಂದಡಿಯಿಟ್ಟಿದ್ದಾರೆ.
ರೋಡ್‌ಶೋವನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಗುಜರಾತ್‌ನಲ್ಲಿ ಬಿಜೆಪಿ 25 ವರ್ಷಗಳಿಂದ ಅಧಿಕಾರದಲ್ಲಿದೆ. ಆದರೆ ಭ್ರಷ್ಟಾಚಾರವನ್ನು ಕೊನೆಗೊಳಿಸಲು ಸಾಧ್ಯವಾಗಲಿಲ್ಲ. ನಾನು ಯಾವುದೇ ಪಕ್ಷವನ್ನು ಟೀಕಿಸಲು ಬಂದಿಲ್ಲ, ಬಿಜೆಪಿಯನ್ನು ಸೋಲಿಸಲು ಬಂದಿಲ್ಲ, ಕಾಂಗ್ರೆಸನ್ನೂ ಸೋಲಿಸಲು ಬಂದಿಲ್ಲ, ಗುಜರಾತ್ ಗೆಲ್ಲಿಸಲು ಬಂದಿದ್ದೇನೆ. ಗುಜರಾತ್ ಮತ್ತು ಗುಜರಾತಿಗಳನ್ನು ಗೆಲ್ಲಿಸಬೇಕು ಎಂದರು.
'25 ವರ್ಷಗಳ ನಂತರ ಈಗ ಅವರು (ಬಿಜೆಪಿ) ದುರಹಂಕಾರಿಯಾಗಿದ್ದಾರೆ. ಅವರು ಇನ್ನು ಮುಂದೆ ಜನರ ಮಾತು ಕೇಳುವುದಿಲ್ಲ, ಪಂಜಾಬ್ ಮತ್ತು ದೆಹಲಿ ಜನರು ಮಾಡಿದಂತೆ ಆಮ್ ಆದ್ಮಿ ಪಕ್ಷಕ್ಕೂ ಒಂದು ಅವಕಾಶ ನೀಡಿ.ನಿಮಗೆ ಇಷ್ಟವಿಲ್ಲದಿದ್ದರೆ ಮುಂದಿನ ಬಾರಿ ನಮ್ಮನ್ನು ಬದಲಾಯಿಸಿ, ಆಮ್ ಆದ್ಮಿ ಪಕ್ಷಕ್ಕೆ ಒಂದು ಅವಕಾಶ ನೀಡಿ. ನಮಗೆ ಅವಕಾಶ ನೀಡಿದರೆ ನೀವು ಎಲ್ಲಾ ಪಕ್ಷಗಳನ್ನು ಮರೆತುಬಿಡುತ್ತೀರಿ ಎಂದು ಅವರು ಹೇಳಿದರು.
ರೋಡ್ ಶೋನಲ್ಲಿ ಮಾತನಾಡಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ 'ದೆಹಲಿ, ಪಂಜಾಬ್ ಗೆದ್ದಾಯ್ತು. ಇದೀಗ ನಾವು ಗುಜರಾತ್ ಗೆ ಸಿದ್ಧರಾಗ್ತಿದ್ದೇವೆ' ಎನ್ನುವ ಮೂಲಕ ಗುಜರಾತ್ ರಾಜ್ಯದಲ್ಲಿ ಎದುರಾಳಿಗಳನ್ನ ಗುಡಿಸಿಹಾಕುವ ತವಕದಲ್ಲಿದ್ದಾರೆ.
ರೋಡ್ ಶೋಗೂ ಮುನ್ನ ಭಗವಂತ್ ಮಾನ್ ಮತ್ತು ಅರವಿಂದ ಕೇಜ್ರಿವಾಲ್ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು.