ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 15.66 ಕೋಟಿ ಬಳಕೆಯಾಗದ ಕೋವಿಡ್ ಲಸಿಕೆ ಡೋಸ್ ಲಭ್ಯ: ಕೇಂದ್ರ ಸರ್ಕಾರ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಲೂ ಸುಮಾರು 15.66 ಕೋಟಿ ಡೋಸ್ ಬಳಕೆಯಾಗದ ಕೋವಿಡ್ ಲಸಿಕೆ ಲಭ್ಯವಿರುವುದಾಗಿ ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.
Published: 02nd April 2022 11:15 AM | Last Updated: 02nd April 2022 11:15 AM | A+A A-

ಸಂಗ್ರಹ ಚಿತ್ರ
ನವದೆಹಲಿ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಲೂ ಸುಮಾರು 15.66 ಕೋಟಿ ಡೋಸ್ ಬಳಕೆಯಾಗದ ಕೋವಿಡ್ ಲಸಿಕೆ ಲಭ್ಯವಿರುವುದಾಗಿ ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ ಬಳಕೆಯಾಗದ ಸುಮಾರು 15,66,02,526 ಕೋಟಿ ಡೋಸ್ ಲಸಿಕೆ ಲಭ್ಯವಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇಲ್ಲಿಯವರೆಗೂ 1,85,21,44,495 ಕೋಟಿ ಡೋಸ್ ಲಸಿಕೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತ ದರದ ಮಾರ್ಗಗಳು ಹಾಗೂ ರಾಜ್ಯಗಳು ನೇರವಾಗಿ ಖರೀದಿಸುವ ವಿಧಾನದ ಮೂಲಕ ಪೂರೈಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಕಳೆದ ವರ್ಷ ಜನವರಿ 16 ರಂದು ದೇಶಾದ್ಯಂತ ಲಸಿಕೆ ಅಭಿಯಾನವನ್ನು ಪ್ರಾರಂಭಿಸಲಾಯಿತು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದರೆ, ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಕಳೆದ ವರ್ಷ ಫೆಬ್ರವರಿ 2 ರಿಂದ ಪ್ರಾರಂಭವಾಯಿತು. ಕಳೆದ ವರ್ಷ ಮಾರ್ಚ್ 1 ರಂದು 60 ವರ್ಷಕ್ಕಿಂತ ಮೇಲ್ಪಟ್ಟವರು, ಸಹ- ಅಸ್ವಸ್ಥರಿಗೆ ಲಸಿಕೆ ನೀಡಿಕೆಯನ್ನು ಆರಂಭಿಸಲಾಗಿತ್ತು.
ಕಳೆದ ವರ್ಷ ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರಿಗೆ ಲಸಿಕೆಯನ್ನು ಪ್ರಾರಂಭಿಸಲಾಗಿತ್ತು. ಕಳೆದ ವರ್ಷ ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಸಾಂಕ್ರಾಮಿಕ ವಿರುದ್ಧ ಲಸಿಕೆ ನೀಡುವ ಮೂಲಕ ಅಭಿಯಾನವನ್ನು ವಿಸ್ತರಿಸಲು ಕೇಂದ್ರವು ನಿರ್ಧರಿಸಿತು. ಈ ವರ್ಷದ ಜನವರಿ 3 ರಿಂದ 15-18 ವರ್ಷ ವಯಸ್ಸಿನ ಹದಿಹರೆಯದವರಿಗೆ ಕೋವಿಡ್ ವ್ಯಾಕ್ಸಿನೇಷನ್ ಆರಂಭವಾಯಿತು.