ಅರುಣಾಚಲ ಪ್ರದೇಶ: ಉಗ್ರರೆಂದು ತಪ್ಪಾಗಿ ಭಾವಿಸಿ ಜನರ ಮೇಲೆ ಗುಂಡು ಹಾರಿಸಿದ ಸೇನಾ ಕಮಾಂಡೋಗಳು ಇಬ್ಬರಿಗೆ ಗಾಯ
ನಾಗಾಲ್ಯಾಂಡ್ ನಲ್ಲಿ ಜನಸಾಮಾನ್ಯರ ಹತ್ಯೆಯ ಘಟನೆಯ ಬೆನ್ನಲ್ಲೆ, ಅರುಣಾಚಲ ಪ್ರದೇಶದಲ್ಲಿ ಇಂಥಹದ್ದೇ ಮತ್ತೊಂದು ಘಟನೆ ವರದಿಯಾಗಿದೆ.
Published: 02nd April 2022 06:30 PM | Last Updated: 02nd April 2022 07:10 PM | A+A A-

ಸೇನೆಯ ಗುಂಡೇಟಿಗೆ ಗಾಯಗೊಂಡ ಜನತೆ
ಗುವಾಹಟಿ: ನಾಗಾಲ್ಯಾಂಡ್ ನಲ್ಲಿ ಜನಸಾಮಾನ್ಯರ ಹತ್ಯೆಯ ಘಟನೆಯ ಬೆನ್ನಲ್ಲೆ, ಅರುಣಾಚಲ ಪ್ರದೇಶದಲ್ಲಿ ಇಂಥಹದ್ದೇ ಮತ್ತೊಂದು ಘಟನೆ ವರದಿಯಾಗಿದೆ. ಅರುಣಾಚಲ ಪ್ರದೇಶದ ತಿರಾಪ್ ಜಿಲ್ಲೆಯಲ್ಲಿ ಸೇನೆಯ ಎಲೈಟ್ 21 ಪ್ಯಾರಾದ ಸಿಬ್ಬಂದಿ ಇಬ್ಬರನ್ನು ಉಗ್ರರೆಂದು ಭಾವಿಸಿ, ಗುಂಡು ಹಾರಿಸಿದ್ದಾರೆ.
ಪರಿಣಾಮ ಗುಂಡೇಟು ತಗುಲಿದ ಇಬ್ಬರೂ ವ್ಯಕ್ತಿಗಳಿಗೆ ತೀವ್ರ ಗಾಯಗಳಾಗಿವೆ. ನೋಖ್ಪುವಾ ವಾಂಗ್ಪನ್ ಹಾಗೂ ರಾಮ್ವಾಂಗ್ ವಾಂಗ್ಸು ಗುಂಡೇಟು ತಗುಲಿದ ವ್ಯಕ್ತಿಗಳಾಗಿದ್ದು, ಓರ್ವ ವ್ಯಕ್ತಿಗೆ ಎಡಗಾಲಿಗೆ ಗಾಯಗಳಾಗಿದ್ದರೆ ಮತ್ತೋರ್ವ ವ್ಯಕ್ತಿಗೆ ಬಲಗೈನಲ್ಲಿ ಗಾಯಗಳಾಗಿವೆ. ಇಬ್ಬರನ್ನೂ ವಿಮಾನ ಕಾರ್ಯಾಚರಣೆಯ ಮೂಲಕ ಅಸ್ಸಾಂ ನ ದಿಬ್ರುಘರ್ ಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅರುಣಾಚಲ ಪ್ರದೇಶದಲ್ಲಿ ಚಾಸ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತರು ಮೀನು ಹಿಡಿದು ವಾಪಸ್ಸಾಗುತ್ತಿದ್ದರು ಈ ವೇಳೆ ಸೇನೆ ಅವರಿಬ್ಬರನ್ನೂ ಉಗ್ರರೆಂದು ತಪ್ಪಾಗಿ ಭಾವಿಸಿ ಗುಂಡಿನ ದಾಳಿ ನಡೆಸಿದೆ. ತಕ್ಷಣಕ್ಕೆ ಸೇನೆ ಅಥವಾ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆಯೂ ಬಂದಿಲ್ಲ.
ಈ ಘಟನೆಗೆ ಸಂಬಂಧಿಸಿದ ವಿಡಿಯೋದಲ್ಲಿ ಅಧಿಕಾರಿಯೊಬ್ಬರು ಸಂತ್ರಸ್ತರ ಕುಟುಂಬಸ್ಥರಿಗೆ ಪರಿಹಾರ ನೀಡುವುದಾಗಿ ಹೇಳಿರುವುದು ವರದಿಯಾಗಿದೆ. ನಾವು ನಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತೇವೆ. ಆಕ್ರೋಶಗೊಂಡ ಗ್ರಾಮಸ್ಥರು ಅಧಿಕಾರಿಗಳನ್ನು ಸುತ್ತುವರೆದಿದ್ದರು. ವೈದ್ಯರು ಹೇಳಿರುವ ಪ್ರಕಾರ ಸಂತ್ರಸ್ತರಿಗೆ ಮಾರಣಾಂತಿಕ ಗಾಯಗಳಾಗಿಲ್ಲ.