ಅರುಣಾಚಲ ಪ್ರದೇಶ: ಉಗ್ರರೆಂದು ತಿಳಿದು ನಾಗರೀಕರ ಮೇಲೆ ಸೇನೆ ಗುಂಡಿನ ದಾಳಿ, ಇಬ್ಬರ ಸಾವು!!
ಉಗ್ರರೆಂದು ತಿಳಿದು ನಾಗರೀಕರ ಮೇಲೆ ಸೇನೆ ಗುಂಡಿನ ದಾಳಿ ಮಾಡಿದ ಪರಿಣಾಮ ಇಬ್ಬರು ನಾಗರೀಕರು ಸಾವನ್ನಪ್ಪಿರುವ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ.
Published: 03rd April 2022 12:19 PM | Last Updated: 03rd April 2022 12:19 PM | A+A A-

ಸಂಗ್ರಹ ಚಿತ್ರ
ತಿರಾಪ್: ಉಗ್ರರೆಂದು ತಿಳಿದು ನಾಗರೀಕರ ಮೇಲೆ ಸೇನೆ ಗುಂಡಿನ ದಾಳಿ ಮಾಡಿದ ಪರಿಣಾಮ ಇಬ್ಬರು ನಾಗರೀಕರು ಸಾವನ್ನಪ್ಪಿರುವ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ.
ಅರುಣಾಚಲ ಪ್ರದೇಶದ ತಿರಾಪ್ ಜಿಲ್ಲೆಯಲ್ಲಿ ಇಬ್ಬರು ನಾಗರಿಕರ ಮೇಲೆ ಸೇನೆಯು "ತಪ್ಪಾಗಿ" ಗುಂಡು ಹಾರಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಶುಕ್ರವಾರ ಸಂಜೆ ಚಾಸಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಮೃತ ಇಬ್ಬರು ಗ್ರಾಮಸ್ಥರನ್ನು ನೋಕ್ಫ್ಯಾ ವಾಂಗ್ಡಾನ್ (28) ಮತ್ತು ರಾಮ್ವಾಂಗ್ ವಾಂಗ್ಸು (23) ಎಂದು ಗುರುತಿಸಲಾಗಿದೆ, ಅವರು ನದಿಯಲ್ಲಿ ಮೀನುಗಾರಿಕೆ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಸೈನಿಕರು ಉಗ್ರರು ಎಂದು ತಪ್ಪಾಗಿ ಭಾವಿಸಿ ಗುಂಡು ಹಾರಿಸಿದ್ದಾರೆ. ಈ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ.
ಇನ್ನು ಘಟನೆಯನ್ನು ನಾಗಾ ಸ್ಟೂಡೆಂಟ್ಸ್ ಫೆಡರೇಶನ್ (NSF) ಘಟನೆಯನ್ನು ಖಂಡಿಸಿದ್ದು, ಈಶಾನ್ಯದಲ್ಲಿರುವ ಎಲ್ಲಾ ನಾಗಾ-ವಸತಿ ಪ್ರದೇಶಗಳಿಂದ ಸಶಸ್ತ್ರ ಪಡೆಗಳು (ವಿಶೇಷ ಅಧಿಕಾರಗಳ ಕಾಯಿದೆ), 1958 ಅಥವಾ AFSPA ಯನ್ನು ಸಂಪೂರ್ಣವಾಗಿ ತೆಗೆದುಹಾಕುವುದರ ಜೊತೆಗೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದೆ. ತಿರಾಪ್ನಿಂದ 150 ಕಿಮೀ ದೂರದಲ್ಲಿರುವ ನೆರೆಯ ನಾಗಾಲ್ಯಾಂಡ್ನ ಮೋನ್ ಜಿಲ್ಲೆಯಲ್ಲಿ ಉಗ್ರಗಾಮಿ ವಿರೋಧಿ ಕಾರ್ಯಾಚರಣೆಯಲ್ಲಿ ಸೇನೆಯು 14 ಜನರನ್ನು ಹೊಡೆದುರುಳಿಸಿದ ತಿಂಗಳುಗಳ ನಂತರ ಗುಂಡಿನ ಘಟನೆ ನಡೆದಿದೆ. ಡಿಸೆಂಬರ್ 4-5 ರಂದು ನಡೆದ ಹಿಂದಿನ ಘಟನೆಯು ಎಎಫ್ಎಸ್ಪಿಎ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.
ಗಾಯಗೊಂಡ ಇಬ್ಬರು ಗ್ರಾಮಸ್ಥರನ್ನು ಚಿಕಿತ್ಸೆಗಾಗಿ ಸೇನೆಯು ದಿಬ್ರುಗಢ್ನಲ್ಲಿರುವ ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (AMCH) ಕಳುಹಿಸಲಾಗಿತ್ತು. ಆದರೆ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಶಸ್ತ್ರ ಬಂಡುಕೋರರ ಚಲನವಲನದ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಇತ್ತು ಮತ್ತು ವಿಶೇಷ ಪಡೆಗಳಿಂದ ಹೊಂಚುದಾಳಿ ನಡೆಸಲಾಯಿತು. ಇದು ತಪ್ಪಾದ ಗುರುತಿನ ಪ್ರಕರಣವಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.