ಬಿಜೆಪಿ ಹುನುಮಂತನ ಮನೆಗೇ ಬೆಂಕಿ ಹಚ್ಚಿದೆ: ತೇಜಸ್ವಿ ಯಾದವ್!!
ದೆಹಲಿಯ 12 ಜನಪಥ್ ರಸ್ತೆಯಲ್ಲಿರುವ ಬಂಗಲೆಯಿಂದ ಸಂಸದ ಚಿರಾಗ್ ಪಾಸ್ವಾನ್ ರನ್ನ ತೆರವು ಮಾಡಿದ್ದಕ್ಕೆ ಬಿಜೆಪಿ ವಿರುದ್ಧ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ತೀವ್ರ ವಾಗ್ದಾಳಿ ಮಾಡಿದ್ದು, ಬಿಜೆಪಿ ಹುನುಮಂತನ ಮನೆಗೇ ಬೆಂಕಿ ಹಚ್ಚಿದೆ ಎಂದು ಕಿಡಿಕಾರಿದೆ.
Published: 03rd April 2022 02:02 PM | Last Updated: 03rd April 2022 02:02 PM | A+A A-

ತೇಜಸ್ವಿ ಯಾದವ್
ಪಾಟ್ನಾ: ದೆಹಲಿಯ 12 ಜನಪಥ್ ರಸ್ತೆಯಲ್ಲಿರುವ ಬಂಗಲೆಯಿಂದ ಸಂಸದ ಚಿರಾಗ್ ಪಾಸ್ವಾನ್ ರನ್ನ ತೆರವು ಮಾಡಿದ್ದಕ್ಕೆ ಬಿಜೆಪಿ ವಿರುದ್ಧ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ತೀವ್ರ ವಾಗ್ದಾಳಿ ಮಾಡಿದ್ದು, ಬಿಜೆಪಿ ಹುನುಮಂತನ ಮನೆಗೇ ಬೆಂಕಿ ಹಚ್ಚಿದೆ ಎಂದು ಕಿಡಿಕಾರಿದೆ.
ತಮ್ಮ ತಂದೆ ರಾಮ್ ವಿಲಾಸ್ ಪಾಸ್ವಾನ್ ರಿಗೆ ನೀಡಿದ ಬಂಗಲೆಯಲ್ಲಿದ್ದ ಸಂಸದ ಚಿರಾಗ್ ಪಾಸ್ವಾನ್ ರನ್ನ ಕಳೆದ ಬುಧವಾರ ಹೊರಹಾಕಲಾಗಿತ್ತು. ಈ ಕ್ರಮವನ್ನ ಖಂಡಿಸಿರೋ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ತಮ್ಮ ತಂದೆಯ ಬಂಗಲೆಯಿಂದ ಚಿರಾಗ್ ಪಾಸ್ವಾನ್ ರನ್ನ ಹೊರಹಾಕಿರುವ ಘಟನೆಯನ್ನ “ಬಿಜೆಪಿಯವರು ಹನುಮಂತನ ಬಂಗಲೆಗೆ ಬೆಂಕಿ ಹಚ್ಚಿದರು” ಎಂದು ವಿಶ್ಲೇಷಿಸುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.
“ರಾಮ್ ವಿಲಾಸ್ ಪಾಸ್ವಾನ್ ಕೊನೆಯವರೆಗೂ ಬಿಜೆಪಿಯೊಂದಿಗೆ ನಿಂತಿದ್ದರು. ಬಿಜೆಪಿಗೆ ರಾಮ್ ವಿಲಾಸ್ ಪಾಸ್ವಾನ್ ಹನುಮಂತನಂತಿದ್ದರು. ಆದರೆ ಈಗ ಅದೇ ಬಿಜೆಪಿ ಹನುಮಂತನ ಬಂಗಲೆಗೆ ಬೆಂಕಿ ಹಚ್ಚಿದೆ. ಇದು ಬಿಜೆಪಿಯನ್ನು ಬೆಂಬಲಿಸಿದ ಪರಿಣಾಮವಾಗಿದೆ. ಅವರು ಈಗಾಗಲೇ ಪಕ್ಷವನ್ನು ಒಡೆದು ನಾಯಕರನ್ನು ಬೇರ್ಪಡಿಸಿದ್ದಾರೆ” ಎಂದು ತೇಜಸ್ವಿ ಯಾದವ್ ಪಾಟ್ನಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಏನಿದು ಘಟನೆ?
ರಾಮ್ ವಿಲಾಸ್ ಪಾಸ್ವಾನ್ ನಿಧನದ ನಂತರ ಅವರ ಪುತ್ರ ಮತ್ತು ಲೋಕಸಭಾ ಸಂಸದ ಚಿರಾಗ್ ಪಾಸ್ವಾನ್ ಬಂಗಲೆಯಲ್ಲಿ ವಾಸವಾಗಿದ್ದರು. ರಾಮ್ ವಿಲಾಸ್ ಪಾಸ್ವಾನ್ ಅವರು ಯುಪಿಎ ಮತ್ತು ಎನ್‌ಡಿಎ ಸರ್ಕಾರಗಳಲ್ಲಿ ಕೇಂದ್ರ ಸಚಿವರಾಗಿದ್ದರು ಮತ್ತು ದೀರ್ಘ ವರ್ಷಗಳ ಕಾಲ ಬಂಗಲೆಯಲ್ಲಿ ಇದ್ದರು. ರಾಮ್ ವಿಲಾಸ್ ಪಾಸ್ವಾನ್ ನಿಯಮಿತವಾಗಿ ಪತ್ರಿಕಾಗೋಷ್ಠಿಗಳನ್ನು ನಡೆಸುವುದರೊಂದಿಗೆ ಈ ಬಂಗಲೆಯು ಎಲ್‌ಜೆಪಿಯ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿಯೂ ಕಾರ್ಯನಿರ್ವಹಿಸಿತು. 12 ಜನಪಥ್‌ನ ಮುಖ್ಯ ದ್ವಾರದ ಮುಂಭಾಗದಲ್ಲಿ ರಾಮ್ ವಿಲಾಸ್ ಪಾಸ್ವಾನ್ ಅವರ ಪ್ರತಿಮೆಯನ್ನು ಸಹ ಇರಿಸಲಾಗಿತ್ತು. ಅಕ್ಟೋಬರ್ 2020 ರಲ್ಲಿ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ನಂತರ, ಕಳೆದ ವರ್ಷ ಆಗಸ್ಟ್ ನಲ್ಲಿ ಕೇಂದ್ರ ರೈಲ್ವೇ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಹಂಚಿಕೆ ಮಾಡಲಾಗಿತ್ತು. ಆದರೆ ಚಿರಾಗ್ ಪಾಸ್ವಾನ್ ಬಂಗಲೆಯನ್ನ ತೆರವು ಮಾಡಿರಲಿಲ್ಲ. ಈ ಸಂಬಂಧ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ನೀಡಲಾಗಿದ್ದ ಬಂಗಲೆ ತೆರವು ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಇದೇ ಕಾರಣಕ್ಕೆ ಆ ಬಂಗಲೆಯಲ್ಲಿದ್ದ ಚಿರಾಗ್ ಪಾಸ್ವಾನ್ ರನ್ನು ತೆರವುಗೊಳಿಸಲಾಗಿದೆ ಎನ್ನಲಾಗಿದೆ.
ಯುಪಿ ಮಾದರಿ ಬಗ್ಗೆ ತೇಜಸ್ವಿ ಯಾದವ್ ಕಿಡಿ
ಪಾಟ್ನಾದ ಸುದ್ದಿಗೋಷ್ಠಿಯಲ್ಲಿ ಯುಪಿ ಮಾದರಿ ಬಗ್ಗೆ ತೇಜಸ್ವಿ ಯಾದವ್ ವ್ಯಂಗ್ಯವಾಡಿದ್ರು. ಬಿಜೆಪಿಯ ಯುಪಿ ಮಾದರಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರ್‌ಜೆಡಿ ನಾಯಕ, ಬಿಹಾರದಲ್ಲಿ ಜನರು ಅವರ ಸರ್ಕಸ್ ಮಾದರಿಯನ್ನು ನೋಡಿದ್ದಾರೆ, ಯುಪಿ ಮಾದರಿಯನ್ನು ಇನ್ನೂ ಅರ್ಥಮಾಡಿಕೊಳ್ಳಲಾಗಿಲ್ಲ, ಬುಲ್ಡೋಜರ್ ಓಡಿಸುವುದು ಉತ್ತರ ಪ್ರದೇಶ ಮಾದರಿಯಾಗಿದ್ದರೆ, ಅವರು ಬುಲ್ಡೋಜರ್ ಅನ್ನು ನಿರುದ್ಯೋಗದ ಮೇಲೆ ಏಕೆ ಓಡಿಸಬಾರದು? ನಿರುದ್ಯೋಗ, ಅಪರಾಧ ಮತ್ತು ಭ್ರಷ್ಟಾಚಾರದ ಮೇಲೆ ಯೋಗಿ ಜಿ ಬುಲ್ಡೋಜರ್‌ಗಳನ್ನು ಓಡಿಸಬೇಕು ” ಎಂದು ಯುಪಿ ಮಾದರಿ ಬಗ್ಗೆ ವ್ಯಂಗ್ಯವಾಡಿದರು.