ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಸ್ಥಳ ಬಟೇಶ್ವರ ಅಭಿವೃದ್ಧಿಗೆ ನಿರ್ಧಾರ
ಉತ್ತರ ಪ್ರದೇಶದ ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್ ಅವರು ಭಾನುವಾರ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಸ್ಥಳವಾದ ಬಟೇಶ್ವರವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಕೆಲಸ ಆರಂಭವಾಗಿದೆ ಎಂದು ತಿಳಿಸಿದರು.
Published: 03rd April 2022 09:03 PM | Last Updated: 03rd April 2022 09:03 PM | A+A A-

ಅಟಲ್ ಬಿಹಾರಿ ವಾಜಪೇಯಿ
ಬಟೇಶ್ವರ: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಸ್ಥಳವಾದ ಬಟೇಶ್ವರವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಕೆಲಸ ಆರಂಭವಾಗಿದೆ ಎಂದು ಉತ್ತರ ಪ್ರದೇಶದ ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್ ತಿಳಿಸಿದರು. ಯೋಜನೆ ಅಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ತಂಡವು ಪ್ರದೇಶಕ್ಕೆ ಭೇಟಿ ನೀಡಿದೆ. ಈಗ ಇದಕ್ಕಾಗಿ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮೈನ್ಪುರಿ ಸದರ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಸಿಂಗ್, ಹೊಸದಾಗಿ ರಚನೆಯಾದ ಯೋಗಿ ಸರ್ಕಾರದಲ್ಲಿ ಪ್ರವಾಸೋದ್ಯಮ ಮತ್ತು ಸಂಸ್ಕೃತ ಇಲಾಖೆಯ ಜವಾಬ್ದಾರಿಯನ್ನು ಪಡೆದ ನಂತರ ಮೊದಲ ಬಾರಿಗೆ ಈ ಪ್ರದೇಶಕ್ಕೆ ಭೇಟಿ ನೀಡಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಭಾರತೀಯ ಸಂಸ್ಕೃತಿ ಮತ್ತು ರಾಷ್ಟ್ರೀಯತೆ’ ಎಂಬ ಅಜೆಂಡಾವನ್ನು ಜಾರಿಗೆ ತರುವುದು ಬಿಜೆಪಿಯ ನೀತಿಯಾಗಿದೆ. ಹೊರಗಿನಿಂದ ಬರುವ ಪ್ರವಾಸಿಗರು ಭಾರತೀಯ ಸಂಸ್ಕೃತಿಯ ಪರಿಚಯವನ್ನು ಪಡೆಯಬಹುದು. ಬಟೇಶ್ವರ ಧಾಮವನ್ನು ಪ್ರವಾಸೋದ್ಯಮವಾಗಿ ಅಭಿವೃದ್ಧಿಪಡಿಸುವುದು ನನ್ನ ಆದ್ಯತೆಯಾಗಿದೆ ಎಂದು ಸಿಂಗ್ ಹೇಳಿದರು.
ದೇವಾಲಯಗಳಿಂದ ಕೂಡಿದ ಬಟೇಶ್ವರ ಧಾಮವನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಕ್ರಿಯಾ ಯೋಜನೆಯನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವಂತೆ ಈ ಕಾರ್ಯಕ್ಕೆ ರಚಿಸಿರುವ ಪ್ರವಾಸೋದ್ಯಮ ಇಲಾಖೆ ತಂಡಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.