ಪುಲ್ವಾಮಾದಲ್ಲಿ ಕಾಶ್ಮೀರೇತರರ ಮೇಲೆ ಉಗ್ರರಿಂದ ದಾಳಿ: ಬಂಡಿಪೋರದಲ್ಲಿ ಐವರು ಲಷ್ಕರ್ ಉಗ್ರರನ್ನು ಬಂಧಿಸಿದ ಸೇನೆ!
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕಾಶ್ಮೀರೇತರರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಸೇನೆ ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.
Published: 03rd April 2022 09:48 PM | Last Updated: 03rd April 2022 09:48 PM | A+A A-

ಭಾರತೀಯ ಯೋಧರು
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕಾಶ್ಮೀರೇತರರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಸೇನೆ ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.
ಇನ್ನೊಂದೆಡೆ ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ವಿಭಿನ್ನ ಸ್ಥಳಗಳಲ್ಲಿ ಲಷ್ಕರ್-ಎ-ತೊಯ್ಬಾ (ಲಷ್ಕರ್) ನ ಭಯೋತ್ಪಾದಕ ಘಟಕಗಳನ್ನು ಭೇದಿಸುವ ಮೂಲಕ ಐವರು ಭಯೋತ್ಪಾದಕರನ್ನು ಬಂಧಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ.
ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳ ಜಂಟಿ ತಂಡವು ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಭಯೋತ್ಪಾದಕ ಸಂಘಟನೆ ಲಷ್ಕರ್‌ನ ನಾಲ್ವರು ಸಹಚರರನ್ನು ಬಂಧಿಸಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರನ್ನು ಅಸ್ಜುಟಂಗು ನಿವಾಸಿ ಇರ್ಫಾನ್ ಅಹ್ಮದ್ ಭಟ್, ಕಾಜಿಪೋರಾದ ಇರ್ಫಾನ್ ಅಹ್ಮದ್ ಜಾನ್, ಬಂಡಿಪೋರಾದ ಅರಿನ್ ಪ್ರದೇಶದ ನಿವಾಸಿಗಳಾದ ಸಜಾದ್ ಅಹ್ಮದ್ ಮಿರ್ ಮತ್ತು ಶಾರಿಕ್ ಅಹ್ಮದ್ ಮಿರ್ ಎಂದು ಗುರುತಿಸಲಾಗಿದೆ. ಇವರಿಂದ ಚೀನಾ ನಿರ್ಮಿತ ಮೂರು ಗ್ರೆನೇಡ್ ಮತ್ತು ಇತರ ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಡಿಪೋರಾ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರಿಗೆ ಸಿಮ್ ಕಾರ್ಡ್ ಮತ್ತು ಇತರ ವಸ್ತುಗಳನ್ನು ಒದಗಿಸುವಲ್ಲಿ ನಾಲ್ವರು ಭಯೋತ್ಪಾದಕರು ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬಂಡಿಪೋರಾ ಪೊಲೀಸ್ ಠಾಣೆಯಲ್ಲಿ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಇನ್ನೊಂದೆಡೆ ಭದ್ರತಾ ಪಡೆಗಳೊಂದಿಗೆ ಪೊಲೀಸರು ಜಂಟಿಯಾಗಿ ರಾಖ್ ಹಾಜಿನ್ ಪೋಸ್ಟ್‌ನಲ್ಲಿ ಹಾಜಿನ್ ನಿವಾಸಿ ಇರ್ಫಾನ್ ಅಜೀಜ್ ಭಟ್ ಎಂದು ಗುರುತಿಸಲಾದ ಭಯೋತ್ಪಾದಕರ ಮತ್ತೊಬ್ಬ ಸಹಚರನನ್ನು ಬಂಧಿಸಿದ್ದಾರೆ. ಈತನಿಂದ ಚೀನಾ ನಿರ್ಮಿತ ಗ್ರೆನೇಡ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಉಗ್ರ ಪಾಕಿಸ್ತಾನಿ ಭಯೋತ್ಪಾದಕ ಉಮರ್ ಲಾಲಾಗೆ ನಿಕಟವಾಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹಾಜಿನ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವಂತೆ ಈತನಿಗೆ ಸೂಚನೆ ನೀಡಲಾಗಿತ್ತು. ಇದರೊಂದಿಗೆ ಹಾಜಿನ್‌ಗೆ ಸೇರಿದ ಭಯೋತ್ಪಾದಕ ಸಲೀಂ ಪಾರೆ ಜತೆಗೂ ಸಂಪರ್ಕದಲ್ಲಿದ್ದ ಎಂಬುದು ಗೊತ್ತಾಗಿದೆ. ಸಂಬಂಧಿತ ಕಾನೂನಿನ ಅಡಿಯಲ್ಲಿ ಹಾಜಿನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.