
ಸಿಆರ್ಪಿಎಫ್ ಯೋಧರು
ಶ್ರೀನಗರ: ಶ್ರೀನಗರದ ಲಾಲ್ ಚೌಕ್‌ನಲ್ಲಿ ಭಯೋತ್ಪಾದಕರು ಸೋಮವಾರ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಒಬ್ಬ ಸಿಆರ್‌ಪಿಎಫ್ ಯೋಧ ಹುತಾತ್ಮರಾಗಿದ್ದಾರೆ.
ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದು, ಭಯೋತ್ಪಾದಕರ ದಾಳಿ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಇದೇ ವೇಳೆ ಮತ್ತೊಬ್ಬರು ಗಾಯಗೊಂಡಿದ್ದಾರೆ, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಜಮ್ಮು-ಕಾಶ್ಮೀರ: ಪೂಂಚ್‌ನ ಎಲ್‌ಒಸಿ ಬಳಿ ಉಗ್ರರ ಅಡಗುತಾಣ ಪತ್ತೆ, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
ದಾಳಿಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ಭದ್ರತಾ ಪಡೆ ಸ್ಥಳಕ್ಕೆ ದೌಡಾಯಿಸಿದರು. ಸ್ಥಳದಲ್ಲಿ ತೀವ್ರ ನಿಗಾ ಇರಿಸಿರುವ ಭದ್ರತಾ ಪಡೆಗಳು, ಭಯೋತ್ಪಾದಕರ ಪತ್ತೆಗಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
ಈ ದಾಳಿಗೆ ಮುನ್ನ ಇಂದು ಮುಂಜಾನೆ ಪುಲ್ವಾಮಾ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತೊಮ್ಮೆ ಇಬ್ಬರು ಸ್ಥಳೀಯರಲ್ಲದವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿರುವ ಘಟನೆ ನಡೆದಿದೆ. ಪುಲ್ವಾಮಾದ ಲಾಜೋರಾದಲ್ಲಿ ಉಗ್ರರು ಗುಂಡು ಹಾರಿಸಿ ಇಬ್ಬರನ್ನು ಗಾಯಗೊಳಿಸಿದ್ದಾರೆ. ಗಾಯಗೊಂಡ ಇಬ್ಬರನ್ನೂ ಎಸ್‌ಎಂಎಚ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ವಲಸೆ ನಿವಾಸಿಗಳು ಎಂದು ಹೇಳಲಾಗಿದೆ.
ಇನ್ನು ಭಾನುವಾರ ಸಂಜೆ ಪುಲ್ವಾಮಾ ಜಿಲ್ಲೆಯ ಲಿಟ್ಟರ್ ಪ್ರದೇಶದಲ್ಲಿ ಕೋಳಿ ಗಾಡಿಯನ್ನು ತಂದಿದ್ದ ಇಬ್ಬರು ಕಾಶ್ಮೀರೇತರರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಗಾಯಗೊಂಡಿರುವ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಪಂಜಾಬ್‌ನ ಪಠಾಣ್‌ಕೋಟ್ ನಿವಾಸಿಗಳು ಎಂದು ತಿಳಿದುಬಂದಿದೆ.
ಘಟನೆಯ ನಂತರ ಪೊಲೀಸ್ ಮತ್ತು ಇತರ ಭದ್ರತಾ ಪಡೆಗಳ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದರು. ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆಗೆ ಒಳಪಡಿಸಿದ ನಂತರ, ಇಡೀ ಪ್ರದೇಶದಲ್ಲಿ ಕಟ್ಟೆಚ್ಚರವಹಿಸಿದ್ದಾರೆ.