‘ವರದಕ್ಷಿಣೆಯ ಅನುಕೂಲಗಳು’ ಪಠ್ಯ ವಿವಾದ: ಕ್ರಮ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಎನ್ ಸಿಡಬ್ಲ್ಯೂ ಸೂಚನೆ
ವರದಕ್ಷಿಣೆ ಪದ್ಧತಿಯ ಅನುಕೂಲಗಳು ಎಂಬ ಪಠ್ಯದ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗ್ತಿದ್ದಂತೆ ನರ್ಸಿಂಗ್ ವಿದ್ಯಾರ್ಥಿಗಳಿಗೆ ಒದಗಿಸಲಾಗಿದ್ದ ಪುಸ್ತಕದಲ್ಲಿನ ಅಂಶಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗ(ಎನ್....
Published: 05th April 2022 06:29 PM | Last Updated: 07th November 2022 11:33 AM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ವರದಕ್ಷಿಣೆ ಪದ್ಧತಿಯ ಅನುಕೂಲಗಳು ಎಂಬ ಪಠ್ಯದ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗ್ತಿದ್ದಂತೆ ನರ್ಸಿಂಗ್ ವಿದ್ಯಾರ್ಥಿಗಳಿಗೆ ಒದಗಿಸಲಾಗಿದ್ದ ಪುಸ್ತಕದಲ್ಲಿನ ಅಂಶಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗ(ಎನ್ ಸಿಡಬ್ಲ್ಯೂ) ಮಂಗಳವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಸೂಚಿಸಿದೆ.
ಪುಸ್ತಕವನ್ನು ಟಿ.ಕೆ. ಇಂದ್ರಾಣಿ ಅವರು ಬರೆದಿದ್ದು, ಭಾರತೀಯ ನರ್ಸಿಂಗ್ ಕೌನ್ಸಿಲ್ ಪಠ್ಯಕ್ರಮದ ಪ್ರಕಾರ ವಿದ್ಯಾರ್ಥಿಗಳ ಅಧ್ಯಯನದ ವಿಷಯವಾಗಿದೆ. Sociology for Nurses ಪುಸ್ತಕದಲ್ಲಿ ವರದಕ್ಷಿಣೆ ಪದ್ದತಿಯ ಅರ್ಹತೆ ಮತ್ತು ಅನುಕೂಲಗಳನ್ನು ಪಟ್ಟಿ ಮಾಡಲಾಗಿದೆ. ಅದರಲ್ಲಿ ವರದಕ್ಷಿಣೆಯ ಹೊರೆಯಿಂದಾಗಿ, ಅನೇಕ ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಪ್ರಾರಂಭಿಸಿದ್ದಾರೆ. ಹೆಣ್ಣುಮಕ್ಕಳು ಶಿಕ್ಷಣ ಪಡೆದಾಗ ಅಥವಾ ಉದ್ಯೋಗದಲ್ಲಿರುವಾಗ ವರದಕ್ಷಿಣೆಯ ಬೇಡಿಕೆ ಕಡಿಮೆ ಇರುತ್ತದೆ. ಇದು ಪರೋಕ್ಷ ಪ್ರಯೋಜನವಾಗಿದೆ. ನೋಡಲು ಸುಂದರವಾಗಿಲ್ಲದ ಹುಡುಗಿಯರೂ ಸಹ ವರದಕ್ಷಿಣೆ ಪದ್ಧತಿಯಿಂದಾಗಿ ಮದುವೆಯಾಗಬಹುದು ಎಂಬ ಅಂಶ ಸೇರಿದಂತೆ ಹಲವು ವಿವಾದಾತ್ಮಕ ಅಂಶಗಳನ್ನ ಪಟ್ಟಿ ಮಾಡಲಾಗಿದೆ. ಪಠ್ಯಪುಸ್ತಕದ ಈ ಪ್ರತಿಯನ್ನ ಹಲವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಚಾರ ತೀವ್ರಗೊಳ್ತಿದ್ದಂತೆ ಇಂದು ಕೇಂದ್ರ ಮಹಿಳಾ ಆಯೋಗ ಕೇಂದ್ರ ಸರ್ಕಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಇದನ್ನು ಓದಿ: ವರದಕ್ಷಿಣೆ ರಹಿತ ಮದುವೆಗಳಲ್ಲಿ ಮಾತ್ರ ಬಿಹಾರ ಸಿಎಂ ನಿತೀಶ್ ಕುಮಾರ್ ಭಾಗಿ
“ಇದು ಗಂಭೀರ ವಿಚಾರ. ಚಾಲ್ತಿಯಲ್ಲಿರುವ ‘ವರದಕ್ಷಿಣೆ’ ಎಂಬ ಪಿಡುಗಿನ ಬಗ್ಗೆ ವಿದ್ಯಾರ್ಥಿಗಳಿಗೆ ಬಹಳ ತಪ್ಪು ಸಂದೇಶ ರವಾನಿಸುತ್ತದೆ” ಎಂದಿರುವ ಎನ್ ಸಿಡಬ್ಲ್ಯೂಅಧ್ಯಕ್ಷೆ ರೇಖಾ ಶರ್ಮಾ ಅವರು, ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಮತ್ತು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಪತ್ರ ಬರೆದಿದ್ದಾರೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರಿಗೂ ಕೇಂದ್ರ ಮಹಿಳಾ ಆಯೋಗ ಪತ್ರ ಬರೆದಿದ್ದು, ಒಂದು ವಾರದೊಳಗೆ ಈ ಪ್ರಮಾದದ ಬಗ್ಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಆಯೋಗಕ್ಕೆ ತಿಳಿಸಬೇಕೆಂದು ಸೂಚಿಸಿದ್ದಾರೆ.
ಇನ್ನೂ ಪ್ರಕಾಶಕರು ಮತ್ತು ಲೇಖಕರು ಅವಹೇಳನಕಾರಿ ವಿಷಯ ಇರುವ ಪಠ್ಯಪುಸ್ತಕಗಳ ಮಾರಾಟಕ್ಕೆ ತನ್ನ ಹೆಸರು ಬಳಸಿರುವುದನ್ನು ಭಾರತೀಯ ನರ್ಸಿಂಗ್ ಕೌನ್ಸಿಲ್(ಐಎನ್‌ಸಿ) ಖಂಡಿಸಿದೆ.
ಭಾರತೀಯ ನರ್ಸಿಂಗ್ ಕೌನ್ಸಿಲ್ ಪಠ್ಯಕ್ರಮದ ಪ್ರಕಾರ ಬರೆಯಲಾಗಿದೆ ಎಂದು ಪುಸ್ತಕದ ಕವರ್ ಮೇಲಿದೆ ಎಂಬುದು ತನ್ನ ಗಮನಕ್ಕೆ ಬಂದಿದ್ದು, ಇಂದು ಖಂಡನೀಯ ಎಂದು ಐಎನ್ ಸಿ ಪ್ರಕಟಣೆಯಲ್ಲಿ ತಿಳಿಸಿದೆ.