ಮಗನ ಗಾಂಜಾ ವ್ಯಸನ ಬಿಡಿಸಲು ಕಣ್ಣಿಗೆ ಖಾರದ ಪುಡಿ ಹಾಕಿ ಶಿಕ್ಷೆ ಕೊಟ್ಟ ತಾಯಿ!!?
ಮಗನ ಗಾಂಜಾ ವ್ಯಸನದಿಂದ ಹೈರಾಣಾಗಿದ್ದ ತಾಯಿಯೊಬ್ಬರು ಆತನನ್ನು ಕಂಬಕ್ಕೆ ಕಟ್ಟಿ ಕಣ್ಣಿಗೆ ಖಾರದ ಪುಡಿ ಹಾಕಿ ಶಿಕ್ಷೆ ನೀಡಿರುವ ಘಟನೆ ನೆರೆಯ ತೆಲಂಗಾಣ ರಾಜ್ಯದಲ್ಲಿ ನಡೆದಿದೆ.
Published: 05th April 2022 05:41 PM | Last Updated: 05th April 2022 07:50 PM | A+A A-

ಮಗನನ್ನು ಕಟ್ಟಿಹಾಕಿ ಥಳಿಸಿದ ತಾಯಿ
ಹೈದರಾಬಾದ್: ಮಗನ ಗಾಂಜಾ ವ್ಯಸನದಿಂದ ಹೈರಾಣಾಗಿದ್ದ ತಾಯಿಯೊಬ್ಬರು ಆತನನ್ನು ಕಂಬಕ್ಕೆ ಕಟ್ಟಿ ಕಣ್ಣಿಗೆ ಖಾರದ ಪುಡಿ ಹಾಕಿ ಶಿಕ್ಷೆ ನೀಡಿರುವ ಘಟನೆ ನೆರೆಯ ತೆಲಂಗಾಣ ರಾಜ್ಯದಲ್ಲಿ ನಡೆದಿದೆ.
ತೆಲಂಗಾಣ ರಾಜ್ಯದ ಹೈದ್ರಾಬಾದ್ ಸಮೀಪದ ಸೂರ್ಯಪೇಟೆಯಲ್ಲಿ ಈ ಘಟನೆ ನಡೆದಿದ್ದು, ಗಾಂಜಾ ವ್ಯಸನದ ದಾಸಾಗಿದ್ದ ದಿನಗೂಲಿ ನೌಕರನ 15 ವರ್ಷದ ಪುತ್ರನಿಗೆ ಆತನ ತಾಯಿಯೇ ಥಳಿಸಿ, ಆತನ ಕೈಕಾಲು ಕಟ್ಟಿ, ವಿದ್ಯುತ್ ಕಂಬಕ್ಕೆ ಬಿಗಿದು, ಕಣ್ಣಿಗೆ ಖಾರದ ಪುಡಿ ಹಾಕಿ ಥಳಿಸಿದ್ದಾರೆ.
ಇಷ್ಟಕ್ಕೂ ತಾಯಿ ತನ್ನ 15 ವರ್ಷದ ಮಗನನ್ನು ಈ ರೀತಿಯಾಗಿ ಥಳಿಸಲು ಬಲವಾದ ಕಾರಣ ಇದ್ದು, ಅದು ಮಗನ ಗಾಂಜಾ ವ್ಯಸನ. 15 ವರ್ಷದ ಬಾಲಕ ಈಗಾಗಲೇ ಗಾಂಜಾ ವ್ಯಸನಿಯಾಗಿದ್ದು, ಸ್ನೇಹಿತರ ಜೊತೆ ಸೇರಿ ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗಿದ್ದನಂತೆ.
ಈ ವಿಚಾರ ತಿಳಿದ ತಾಯಿ ಮಗನ ಚಟ ಬಿಡಿಸಲು ಮುಂದಾಗಿದ್ದು, ಈ ರೀತಿಯ ಉಗ್ರ ಶಿಕ್ಷೆ ಕೊಟ್ಟಿದ್ದಾರೆ. ಹುಡುಗನಿಗೆ ಈ ಹಿಂದೆ ಮನೆಯವರೆಲ್ಲ ತುಂಬಾ ಸಲ ಬುದ್ಧಿ ಹೇಳಿದ್ದಾರೆ. ಆದರೆ ಆತ ಕೇಳದೇ, ತನ್ನ ಚಟ ಮುಂದುವರಿಸಿದ್ದಾನೆ. ಹೀಗಾಗಿ ಮಗ ಗಾಂಜಾ ವ್ಯಸನಿಯಾಗಿರುವುದನ್ನು ನೋಡಿ ಸಹಿಸಲಾಗದೇ ತಾಯಿ ಹುಡುಗನಿಗೆ ಥಳಿಸಿ ಮುಖಕ್ಕೆ ಮೆಣಸಿನಕಾಯಿ ಪುಡಿ ಹಚ್ಚಿದ್ದಾರೆ.
ಕಣ್ಣಿಗೆ ಖಾರದ ಪುಡಿ ಬೀಳುತ್ತಿದ್ದಂತೆಯೇ ಉರಿ ತಾಳಲಾರದೆ ಕಿರುಚಾಡಿದ ಮಗ ಒಂದು ವರ್ಷದೊಳಗೆ ಗಾಂಜಾ ಸೇವಸಿವುದನ್ನು ಬಿಡುವುದಾಗಿ ಭರವಸೆ ನೀಡಿದ ಬಳಿಕ ಆತನನ್ನು ಬಿಟ್ಟಿದ್ದಾರೆ. ತಾಯಿ ತನ್ನ ಮಗನನ್ನು ಥಳಿಸುತ್ತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿ, ಸೋಶಿಯಲ್ ಮೀಡಿಯಾಕ್ಕೆ ಅಪ್ಲೋಡ್ ಮಾಡಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜನರು ತಾಯಿ ನಡೆಗೆ ಪರ ವಿರೋಧದ ಕಾಮೆಂಟ್ ಮಾಡುತ್ತಿದ್ದಾರೆ.