‘ರಂಜಾನ್ ಸಮಯದಲ್ಲಿ ಮುಸ್ಲಿಂ ಸಿಬ್ಬಂದಿಗೆ 2 ಗಂಟೆ ವಿರಾಮ’ ಆದೇಶ ಹಿಂಪಡೆದ ದೆಹಲಿ ಮಹಾನಗರ ಪಾಲಿಕೆ
ರಾಜ್ಯದಲ್ಲಿ ಹಿಜಾಬ್, ಹಲಾಲ್ ಕಟ್, ಮಸೀದಿಗಳಲ್ಲಿ ಮೈಕ್ ನಿಷೇಧ ಸೇರಿದಂತೆ ಹಲವು ಧಾರ್ಮಿಕ ವಿಚಾರಗಳ ವಿವಾದ ಜೋರಾಗಿವೆ. ದೆಹಲಿಯ ಪೂರ್ವ ಮತ್ತು ದಕ್ಷಿಣ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಚೈತ್ರ ಮಾಸದ ನವರಾತ್ರಿ...
Published: 06th April 2022 07:01 PM | Last Updated: 06th April 2022 07:01 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ರಾಜ್ಯದಲ್ಲಿ ಹಿಜಾಬ್, ಹಲಾಲ್ ಕಟ್, ಮಸೀದಿಗಳಲ್ಲಿ ಮೈಕ್ ನಿಷೇಧ ಸೇರಿದಂತೆ ಹಲವು ಧಾರ್ಮಿಕ ವಿಚಾರಗಳ ವಿವಾದ ಜೋರಾಗಿವೆ. ದೆಹಲಿಯ ಪೂರ್ವ ಮತ್ತು ದಕ್ಷಿಣ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಚೈತ್ರ ಮಾಸದ ನವರಾತ್ರಿ ವೇಳೆ ಮಾಂಸದಂಗಡಿಗಳನ್ನ ಬಂದ್ ಮಾಡುವ ಆದೇಶ ಸೇರಿದಂತೆ ರಂಜಾನ್ ವೇಳೆ ಮುಸ್ಲಿಂ ಉದ್ಯೋಗಿಗಳಿಗೆ ಎರಡು ಗಂಟೆ ಬೇಗ ತೆರಳಲು ಅವಕಾಶ ನೀಡಿದ್ದ ಆದೇಶವನ್ನು ನವದೆಹಲಿ ಮಹಾನಗರ ಪಾಲಿಕೆ(ಎನ್ಡಿಎಂಸಿ) ಬುಧವಾರ ಹಿಂಪಡೆದಿದೆ.
ಮಂಗಳವಾರ ಹೊರಡಿಸಿದ್ದ ಈ ಆದೇಶವನ್ನು ಎನ್ಡಿಎಂಸಿ ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ ಅವರು ವಿರೋಧಿಸಿದ್ದರು. ಹೀಗಾಗಿ ಇಂದು ರಂಜಾನ್ ಸಮಯದಲ್ಲಿ ಮುಸ್ಲಿಂ ಸಿಬ್ಬಂದಿಗೆ 2 ಗಂಟೆ ವಿರಾಮ ನೀಡುವ ಆದೇಶ ಹಿಂಪಡೆಯಲಾಗಿದೆ.
ಇದನ್ನು ಓದಿ: ನವರಾತ್ರಿ ವೇಳೆ ದೇಶಾದ್ಯಂತ ಮಾಂಸದ ಅಂಗಡಿ ಮುಚ್ಚಬೇಕು: ಬಿಜೆಪಿ ಸಂಸದ ಪರ್ವೇಶ್ ವರ್ಮಾ
ಇನ್ನೂ ಈ ಆದೇಶ ಜಾರಿಯಾದ ಕೆಲವೇ ಸಮಯದ ನಂತರ ದೆಹಲಿ ಜಲಮಂಡಳಿ ಸಹ ಆದೇಶವನ್ನು ಹಿಂಪಡೆದಿದೆ. ರಂಜಾನ್ ಸಮಯದಲ್ಲಿ ಎಲ್ಲಾ ಮುಸ್ಲಿಂ ಉದ್ಯೋಗಿಗಳಿಗೆ ಪ್ರತಿದಿನ ಎರಡು ಗಂಟೆಗಳ ಕಾಲ ವಿರಾಮ ನೀಡುವ ಆದೇಶವನ್ನ ತಕ್ಷಣದಿಂದಲೇ ಜಾರಿಗೆ ಬರುವಂತೆ ದೆಹಲಿ ಜಲ ಮಂಡಳಿ ಮಂಗಳವಾರ ಆದೇಶವನ್ನು ಹಿಂತೆಗೆದುಕೊಂಡಿದೆ. ಏಪ್ರಿಲ್ 4ರಂದು ಹೊರಡಿಸಿದ್ದ ಸುತ್ತೋಲೆಯನ್ನ ಸಕ್ಷಮ ಪ್ರಾಧಿಕಾರವು ಹಿಂಪಡೆಯಲು ನಿರ್ಧರಿಸಿದೆ.
ಸೋಮವಾರ, ದೆಹಲಿ ಜಲಮಂಡಳಿ ಮುಸ್ಲಿಂ ಉದ್ಯೋಗಿಗಳಿಗೆ “ರಂಜಾನ್ ಸಮಯದಲ್ಲಿ ಅಂದರೆ ಏಪ್ರಿಲ್ 3 ರಿಂದ ಮೇ 2 ರವರೆಗೆ ಅಥವಾ ಈದುಲ್ ಫಿತ್ರ್ ದಿನಾಂಕವನ್ನು ಘೋಷಿಸುವವರೆಗೆ ಕಡಿಮೆ ರಜೆಯನ್ನು (ದಿನಕ್ಕೆ ಸರಿಸುಮಾರು ಎರಡು ಗಂಟೆಗಳ ಕಾಲ) ಅನುಮತಿಸಲು ನಿರ್ಧರಿಸಿದೆ ಎಂದು ಹೇಳಿತ್ತು. ಕಚೇರಿ ಕೆಲಸಗಳಿಗೆ ತೊಂದರೆಯಾಗದಂತೆ ಉಳಿದ ಸಮಯದಲ್ಲಿ ಅವರು ತಮ್ಮ ಕೆಲಸವನ್ನು ಪೂರೈಸುತ್ತಾರೆ ಎಂದು ಜಲಮಂಡಳಿ ಹೇಳಿತ್ತು.
ರಂಜಾನ್ ಇಸ್ಲಾಮಿಕ್ ಕ್ಯಾಲೆಂಡರ್ನ ಒಂಬತ್ತನೇ ತಿಂಗಳು. ಈ ಸಮಯದಲ್ಲಿ ಇಸ್ಲಾಂ ಧರ್ಮದ ಅನುಯಾಯಿಗಳು ಮುಂಜಾನೆ ಮತ್ತು ಸೂರ್ಯಾಸ್ತದ ನಡುವೆ ಉಪವಾಸ ಮಾಡುತ್ತಾರೆ, ಶಾಂತಿ ಮತ್ತು ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸುತ್ತಾರೆ.