ರಾಹುಲ್ ಗಾಂಧಿ 'ಸ್ವಂತ ಮನೆಯನ್ನೇ ಸರಿಯಾಗಿ ಕಟ್ಟಿಕೊಳ್ಳಲಾಗ್ತಿಲ್ಲ: ಮಾಯಾವತಿ ತಿರುಗೇಟು
ಬಿಜೆಪಿಗೆ ಮುಕ್ತ ಅವಕಾಶ ನೀಡಲು ಬಿಎಸ್ ಪಿ ನಾಯಕಿ ಮಾಯಾವತಿ ನಮ್ಮ ಮೈತ್ರಿ ಪ್ರಸ್ತಾಪವನ್ನು ತಿರಸ್ಕರಿಸಿದ್ದರು ಎಂದಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಮಾಯಾವತಿ ತಿರುಗೇಟು ನೀಡಿದ್ದಾರೆ.
Published: 10th April 2022 01:32 PM | Last Updated: 10th April 2022 01:33 PM | A+A A-

ಮಾಯಾವತಿ
ಲಖನೌ: ಬಿಜೆಪಿಗೆ ಮುಕ್ತ ಅವಕಾಶ ನೀಡಲು ಬಿಎಸ್ ಪಿ ನಾಯಕಿ ಮಾಯಾವತಿ ನಮ್ಮ ಮೈತ್ರಿ ಪ್ರಸ್ತಾಪವನ್ನು ತಿರಸ್ಕರಿಸಿದ್ದರು ಎಂದಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಮಾಯಾವತಿ ತಿರುಗೇಟು ನೀಡಿದ್ದಾರೆ. ಅವರಿಗೆ ಸ್ವಂತ ಮನೆಯನ್ನೇ ಸರಿಯಾಗಿ ಕಟ್ಟಿಕೊಳ್ಳಲು ಆಗುತ್ತಿಲ್ಲ. ಬಿಎಸ್ ಪಿಯನ್ನು ದೂಷಿಸುತ್ತಿದ್ದಾರೆ ಅಂತಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ಹೇಳಿರುವುದು ಸಂಪೂರ್ಣ ಸುಳ್ಳು ಎಂದು ಪ್ರತಿಪಾದಿಸಿದ ಮಾಯಾವತಿ, ರಾಹುಲ್ ಗಾಂಧಿ ಇಂತಹ ಸಣ್ಣ ವಿಷಯಗಳ ಬದಲಾಗಿ ಯುಪಿ ಚುನಾವಣೆಯ ಸೋಲಿನ ಬಗ್ಗೆ ಗಮನ ಹರಿಸಬೇಕು ಎಂದರು. ಕಾಂಗ್ರೆಸ್ ಇಂತಹ ಟೀಕೆಗಳನ್ನು ಮಾಡುವ ಮೊದಲು 100 ಬಾರಿ ಯೋಚಿಸಬೇಕು. ಅವರು ಬಿಜೆಪಿ ಎದುರು ಗೆಲ್ಲಲು ಸಾಧ್ಯವಾಗಲಿಲ್ಲ. ಆದ್ದರಿಂದ ಇಂತಹ ಟೀಕೆ, ದೋಷರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ, ಇಲ್ಲದಿರುವಾಗಲೂ ಏನನ್ನೂ ಮಾಡಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ:ಮಾಯಾವತಿಗೆ ಯುಪಿ ಸಿಎಂ ಹುದ್ದೆ ಆಫರ್ ನೀಡಲಾಗಿತ್ತು, ಆದರೆ ಅವರು ಸ್ಪಂದಿಸಲಿಲ್ಲ': ರಾಹುಲ್ ಗಾಂಧಿ
ಶನಿವಾರ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಾವು ಬಿಎಸ್ ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧರಿದ್ದೇವು. ಇದಕ್ಕಾಗಿ ಮಾಯಾವತಿ ಅವರನ್ನು ಸಿಎಂ ಆಗಿ ಮಾಡಲು ಪ್ರಸ್ತಾಪ ಮುಂದಿಟ್ಟಿದ್ದೆವು. ಬಿಜೆಪಿಗೆ ಮುಕ್ತ ಅವಕಾಶ ನೀಡಲು ಅವರು ನಮ್ಮ ಆಫರ್ ತಿರಸ್ಕರಿಸಿದ್ದರು. ಅವರಿಗೆ ಸಿಬಿಐ, ಇಡಿ, ಪೆಗಾಸಸ್ ಭಯವಿದ್ದುದರಿಂದ ನಮ್ಮ ಮನವಿಗೆ ಸ್ಪಂದಿಸಲೇ ಇಲ್ಲ ಎಂದಿದ್ದರು.
ರಾಹುಲ್ ಅವರ ಈ ಹೇಳಿಕೆಗೆ ಭಾನುವಾರ ತೀವ್ರ ವಾಗ್ದಾಳಿ ನಡೆಸಿರುವ ಮಾಯಾವತಿ, ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಕೂಡಾ ತಮ್ಮ ಬಹುಜನ ಸಮಾಜ ಪಕ್ಷದ ಮಾನಹಾನಿಗೆ ಪ್ರಯತ್ನಿಸಿದರು. ಈಗ ಪ್ರಿಯಾಂಕಾ ಗಾಂಧಿ ಕೂಡಾ ಅದೇ ರೀತಿ ಮಾಡುತ್ತಿದ್ದಾರೆ. ನಾನು ಇಡಿ ಮತ್ತಿತರ ಸಂಸ್ಥೆಗಳಿಗೆ ಹೆದರುತ್ತೇನೆ ಎಂದು ಹೇಳುತ್ತಿದ್ದಾರೆ. ಇದೆಲ್ಲವೂ ನಿಜವಲ್ಲ. ನಾವು ಈ ಎಲ್ಲಾ ಸಮಸ್ಯೆಗಳನ್ನು ಸುಪ್ರೀಂಕೋರ್ಟ್ ನಲ್ಲಿ ಹೋರಾಡಿ ಗೆದ್ದಿದ್ದೇವೆ ಎಂದು ಅವರು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.