ಅಸ್ಸಾಂ ಎನ್ಆರ್ಸಿ: 27 ಲಕ್ಷಕ್ಕೂ ಹೆಚ್ಚು ಜನರಿಗೆ ಆಧಾರ್ ಕೋರಿ ಪಿಐಎಲ್; ಕೇಂದ್ರ ಸರ್ಕಾರಕ್ಕೆ 'ಸುಪ್ರೀಂ' ನೋಟಿಸ್
ಅಸ್ಸಾಂ ಎನ್ಆರ್ಸಿ ವಿಚಾರಕ್ಕೆ ಸಂಬಂಧಿಸಿದಂತೆ 27 ಲಕ್ಷಕ್ಕೂ ಹೆಚ್ಚು ಜನರಿಗೆ ಆಧಾರ್ ಗುರುತಿನ ಚೀಟಿ ನೀಡಿಕೆ ಸಂಬಂಧ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಇತರರಿಗೆ ಸೋಮವಾರ ನೋಟಿಸ್ ಜಾರಿ ಮಾಡಿದೆ.
Published: 11th April 2022 09:35 PM | Last Updated: 11th April 2022 09:35 PM | A+A A-

ಆಧಾರ್ (ಸಂಗ್ರಹ ಚಿತ್ರ)
ಗುವಾಹತಿ: ಅಸ್ಸಾಂ ಎನ್ಆರ್ಸಿ ವಿಚಾರಕ್ಕೆ ಸಂಬಂಧಿಸಿದಂತೆ 27 ಲಕ್ಷಕ್ಕೂ ಹೆಚ್ಚು ಜನರಿಗೆ ಆಧಾರ್ ಗುರುತಿನ ಚೀಟಿ ನೀಡಿಕೆ ಸಂಬಂಧ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಇತರರಿಗೆ ಸೋಮವಾರ ನೋಟಿಸ್ ಜಾರಿ ಮಾಡಿದೆ.
27.43 ಲಕ್ಷ ಜನರಿಗೆ ಆಧಾರ್ ಕಾರ್ಡ್ಗಳನ್ನು ವಿತರಿಸಲು ನಿರ್ದೇಶನಗಳನ್ನು ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರ, ಅಸ್ಸಾಂ ಸರ್ಕಾರ, ಭಾರತೀಯ ರಿಜಿಸ್ಟ್ರಾರ್ ಜನರಲ್ ಮತ್ತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಗೆ ನೋಟಿಸ್ ಜಾರಿ ಮಾಡಿದೆ.
ಆಗಸ್ಟ್ 2019 ರಲ್ಲಿ ಪ್ರಕಟಿಸಲಾದ ಅಸ್ಸಾಂನ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಯ ಪೂರಕ ಪಟ್ಟಿಗೆ ಈ 27 ಲಕ್ಷ ಮಂದಿಯನ್ನು ಸೇರಿಸಲಾಗಿದ್ದು, ಈ ಸಂಬಂಧ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ನ ರಾಜ್ಯಸಭಾ ಸದಸ್ಯೆ ಸುಶ್ಮಿತಾ ದೇವ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಯುಯು ಲಲಿತ್, ಎಸ್ ರವೀಂದ್ರ ಭಟ್ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರರ ವಕೀಲ, ಹಿರಿಯ ವಕೀಲ ಬಿಶ್ವಜಿತ್ ದೇಬ್ ಅವರು ನ್ಯಾಯಾಲಯದ ಮುಂದೆ ವಾದ ಮಂಡಿಸಿ, ಡಿಸೆಂಬರ್ 2017 ರಲ್ಲಿ ಪ್ರಕಟಿಸಲಾದ ಎನ್ಆರ್ಸಿ ಮೊದಲ ಪಟ್ಟಿಯಲ್ಲಿ ಹೆಸರು ಹೊಂದಿರುವ ವ್ಯಕ್ತಿಗಳು ತಮ್ಮ ಆಧಾರ್ ಕಾರ್ಡ್ಗಳನ್ನು ಸ್ವೀಕರಿಸಿದರೆ, ಪೂರಕ ಪಟ್ಟಿಯಲ್ಲಿ ಸೇರಿಸಲ್ಪಟ್ಟವರಿಗೆ ಅದನ್ನು ನಿರಾಕರಿಸಲಾಗಿದೆ. ಪ್ರತಿಯೊಬ್ಬ ನಿವಾಸಿಯೂ ಆಧಾರ್ ಕಾರ್ಡ್ಗೆ ಅರ್ಹರು ಎಂದು ಆಧಾರ್ ಕಾಯ್ದೆ ಹೇಳುತ್ತದೆ. ವ್ಯಕ್ತಿಗಳಿಗೆ ಆಧಾರ್ ಕಾರ್ಡ್ಗಳನ್ನು ನೀಡಬೇಕು. ಅದನ್ನು ನಿರಾಕರಿಸುವುದು ಮೂಲಭೂತ ಅಗತ್ಯಗಳನ್ನು ನಿರಾಕರಿಸಿದಂತಾಗುತ್ತದೆ ಎಂದು ಅವರು ವಾದ ಮಂಡಿಸಿದರು.
ನಂತರ ನ್ಯಾಯಾಲಯವು ನೋಟಿಸ್ ನೀಡಲು ಒಪ್ಪಿಕೊಂಡಿದ್ದು, ಕೇಂದ್ರ ಸರ್ಕಾರ, ಅಸ್ಸಾಂ ಸರ್ಕಾರ, ಭಾರತೀಯ ರಿಜಿಸ್ಟ್ರಾರ್ ಜನರಲ್ ಮತ್ತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿದೆ ಎಂದು ದೇಬ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಇನ್ನು ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಮೇ 17ಕ್ಕೆ ಮುಂದೂಡಿದೆ ಎಂದು ತಿಳಿದುಬಂದಿದೆ.
ಕ್ಲೈಮ್ಗಳು ಮತ್ತು ಆಕ್ಷೇಪಣೆಗಳ ಪ್ರಕ್ರಿಯೆಯ ಮೂಲಕ ತಮ್ಮ ಹೆಸರನ್ನು ಎನ್ಆರ್ಸಿಯಲ್ಲಿ ಸೇರಿಸಿದ್ದರೂ ಸಹ ಬಯೋಮೆಟ್ರಿಕ್ ವಿವರಗಳನ್ನು ಲಾಕ್ ಮಾಡಿರುವ ವ್ಯಕ್ತಿಗಳು ಆಧಾರ್ ದಾಖಲಾತಿಗಾಗಿ ಅರ್ಜಿಗಳನ್ನು ಸಲ್ಲಿಸಿದ್ದರು ಆದರೆ ಅವುಗಳನ್ನು ಯುಐಡಿಎಐ ಪ್ರಾಧಿಕಾರ ತಿರಸ್ಕರಿಸಿದೆ. ಅಸ್ಸಾಂ ಸರ್ಕಾರವು ಜನರ ಬಯೋಮೆಟ್ರಿಕ್ ವಿವರಗಳನ್ನು ಪ್ರವೇಶಿಸಲು ಅಧಿಕಾರಿಗಳಿಗೆ ಅವಕಾಶ ನೀಡುವಂತೆ ಕೇಂದ್ರಕ್ಕೆ ಎರಡು ಬಾರಿ ಪತ್ರ ಬರೆದಿತ್ತು. ಅವರಲ್ಲಿ ಬಯೋಮೆಟ್ರಿಕ್ ವಿವರಗಳನ್ನು ನಿರ್ಬಂಧಿಸಿರುವ ಅನೇಕರು ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿಲ್ಲ ಎಂದು ಒಪ್ಪಿಕೊಳ್ಳಲಾಗಿದೆ. 1951 ರ NRC ಅನ್ನು ಸುಪ್ರೀಂ ಕೋರ್ಟ್ನ ನೇರ ಮೇಲ್ವಿಚಾರಣೆಯಲ್ಲಿ ನವೀಕರಿಸಲಾಗಿದೆ. 3.30 ಕೋಟಿ ಅರ್ಜಿದಾರರ ಪೈಕಿ 19 ಲಕ್ಷಕ್ಕೂ ಅಧಿಕ ಮಂದಿ ಅಂತಿಮ ಪಟ್ಟಿಯಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ.