7 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ; ಪ್ರಧಾನಿ ಮೋದಿ ನೆರವು ಕೇಳಿದ ಪಿಒಕೆ ಗ್ಯಾಂಗ್ ರೇಪ್ ಸಂತ್ರಸ್ಥೆ!!
ಕಳೆದ ಏಳು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಇದೀಗ ತನಗೆ ಮತ್ತು ತನ್ನ ಮಕ್ಕಳಿಗೆ ಜೀವ ಬೆದರಿಕೆ ಇರುವ ಕಾರಣ ಆಶ್ರಯ ಮತ್ತು ರಕ್ಷಣೆ ನೀಡಿ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಹಾಯ ಕೋರಿದ್ದಾರೆ.
Published: 12th April 2022 07:06 PM | Last Updated: 12th April 2022 07:06 PM | A+A A-

ಸಾಂದರ್ಭಿಕ ಚಿತ್ರ
ಮುಜಾಫರಾಬಾದ್: ಕಳೆದ ಏಳು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಇದೀಗ ತನಗೆ ಮತ್ತು ತನ್ನ ಮಕ್ಕಳಿಗೆ ಜೀವ ಬೆದರಿಕೆ ಇರುವ ಕಾರಣ ಆಶ್ರಯ ಮತ್ತು ರಕ್ಷಣೆ ನೀಡಿ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಹಾಯ ಕೋರಿದ್ದಾರೆ.
ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಡಿಯೋ ಮೂಲಕ ನೆರವು ಯಾಚಿಸಿರುವ ಸಂತ್ರಸ್ಥೆ ಮಾರಿಯಾ ತಾಹಿರ್, "ನಾನು ಕಳೆದ ಏಳು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ. ನನಗೆ ನ್ಯಾಯ ಒದಗಿಸಲು ಪಿಒಜೆಕೆ ಪೊಲೀಸರು, ಸರ್ಕಾರಗಳು ಮತ್ತು ನ್ಯಾಯಾಂಗವು ವಿಫಲವಾಗಿವೆ ಎಂದು ಅಳಲು ತೋಡಿಕೊಂಡಿದ್ದಾರೆ.
ಅಂತೆಯೇ "ಈ ವಿಡಿಯೋದ ಮೂಲಕ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರತಕ್ಕೆ ಬರಲು ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದೇನೆ. ನನ್ನ ಮಕ್ಕಳಿಗೆ ಜೀವ ಬೆದರಿಕೆ ಇದೆ. ಸ್ಥಳೀಯ ಪೊಲೀಸರು ಮತ್ತು ಹಿರಿಯ ರಾಜಕಾರಣಿ ಚೌಧರಿ ತಾರಿಕ್ ಫಾರೂಕ್ ಅವರು ನನ್ನನ್ನು ಮತ್ತು ನನ್ನ ಕುಟುಂಬಸ್ಥರನ್ನು ಯಾವಾಗ ಬೇಕಾದರೂ ಕೊಲ್ಲಬಹುದು. ನಮಗೆ ಆಶ್ರಯ ಮತ್ತು ರಕ್ಷಣೆ ನೀಡುವಂತೆ ನಾನು ಪ್ರಧಾನಿ ಮೋದಿಯನ್ನು ವಿನಂತಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಅಲ್ಲದೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅನೇಕ ಅತ್ಯಾಚಾರ ಸಂತ್ರಸ್ತರು ಮತ್ತು ಅವರ ಕುಟುಂಬಗಳು ತಮ್ಮ ಸಮುದಾಯದಿಂದ ದೂರವಿಡಲ್ಪಡುವ ಭಯದಿಂದಾಗಿ ಅಪರಾಧಿಗಳನ್ನು ಸಾರ್ವಜನಿಕವಾಗಿ ಎದುರಿಸಲು ಮುಂದೆ ಬರಲು ಹೆದರುತ್ತಿದ್ದಾರೆ ಎಂದು ಮಾರಿಯಾ ಆರೋಪಿಸಿದ್ದಾರೆ.
ಮಾರಿಯಾ 2015 ರಲ್ಲಿ ತಮ್ಮ ವಿರುದ್ಧ ನಡೆದ ಘೋರ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಕಠಿಣ ಶಿಕ್ಷೆ ಕೊಡಿಸಲು ನಿರಂತರವಾಗಿ ಹೋರಾಡುತ್ತಿದ್ದಾರೆ. ತನ್ನ ಹಿಂದಿನ ವೀಡಿಯೊದಲ್ಲಿ, ಅವರು ಘಟನೆಯನ್ನು ವಿವರಿಸಿ, "ಹರೂನ್ ರಶೀದ್, ಮಮೂನ್ ರಶೀದ್, ಜಮೀಲ್ ಶಫಿ, ವಕಾಸ್ ಅಶ್ರಫ್, ಸನಮ್ ಹರೂನ್ ಮತ್ತು ಇನ್ನೂ ಮೂವರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಗೈದಿದ್ದರು. ತನ್ನ ವಿರುದ್ಧ ದೌರ್ಜನ್ಯದ ವಿರುದ್ಧ ಮಾರಿಯಾ ಪೊಲೀಸ್ ಮತ್ತು ಸ್ಥಳೀಯ ರಾಜಕಾರಣಿಗಳನ್ನು ಸಂಪರ್ಕಿಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಯತ್ನಿಸಿದ್ದರು. ಆದರೆ ಅದರಲ್ಲಿ ಆಕೆ ಸಫಲವಾಗಲಿಲ್ಲ. ಪಾಕ್ ಆಕ್ರಮಿತ ಕಾಶ್ಮೀರದ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಸ್ಥಳೀಯ ಅಧಿಕಾರಿಗಳಿಗೆ ಹಲವು ಪತ್ರಗಳನ್ನು ಬರೆದಿದ್ದರೂ ಆಕೆ ನ್ಯಾಯ ಪಡೆಯುವಲ್ಲಿ ವಿಫಲರಾದರು. ನ್ಯಾಯದ ಬದಲಿಗೆ ವಿವಾಹಿತ ಮಹಿಳೆ.. 'ಅತ್ಯಾಚಾರ ಮಹಾಪರಾಧವಲ್ಲ' ಎಂಬ ಅವಮಾನ ಎದುರಿಸಿದರು.