MSP ಕುರಿತ ಸಮಿತಿ ಸ್ಥಾಪಿಸಲು ರೈತ ಸಂಘಗಳ ಹೆಸರುಗಳಿಗಾಗಿ ಸರ್ಕಾರ ಇನ್ನೂ ಕಾಯುತ್ತಿದೆ: ಕೃಷಿ ಸಚಿವ ತೋಮರ್
ಈ ಹಿಂದೆ ವಿವಾದಿತ ಕೃಷಿ ಮಸೂದೆಗಳ ವಿಚಾರವಾಗಿ ರೈತ ಪರ ಸಂಘಟನೆಗಳ ಕೆಂಗಣ್ಣಿಗೆ ತುತ್ತಾಗಿದ್ದ ಕೇಂದ್ರ ಸರ್ಕಾರ ಇದೀಗ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ-MSP) ಕುರಿತಂತೆ ಸಮತಿ ರಚಿಸಲು ರೈತ ಸಂಘಗಳ ಹೆಸರುಗಳಿಗಾಗಿ ಕಾಯುತ್ತಿರುವುದಾಗಿ ಹೇಳಿದೆ.
Published: 13th April 2022 08:47 PM | Last Updated: 13th April 2022 08:47 PM | A+A A-

ನರೇಂದ್ರ ಸಿಂಗ್ ತೋಮರ್
ನವದೆಹಲಿ: ಈ ಹಿಂದೆ ವಿವಾದಿತ ಕೃಷಿ ಮಸೂದೆಗಳ ವಿಚಾರವಾಗಿ ರೈತ ಪರ ಸಂಘಟನೆಗಳ ಕೆಂಗಣ್ಣಿಗೆ ತುತ್ತಾಗಿದ್ದ ಕೇಂದ್ರ ಸರ್ಕಾರ ಇದೀಗ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ-MSP) ಕುರಿತಂತೆ ಸಮತಿ ರಚಿಸಲು ರೈತ ಸಂಘಗಳ ಹೆಸರುಗಳಿಗಾಗಿ ಕಾಯುತ್ತಿರುವುದಾಗಿ ಹೇಳಿದೆ.
ಈ ಕುರಿತಂತೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, 'ಕನಿಷ್ಠ ಬೆಂಬಲ ಬೆಲೆಯ (ಎಂಎಸ್ಪಿ) ಸಮಿತಿಯನ್ನು ಸ್ಥಾಪಿಸಲು ರೈತ ಸಂಘಗಳ ಸದಸ್ಯರ ಹೆಸರಿಗಾಗಿ ಕೇಂದ್ರ ಸರ್ಕಾರವು ಇನ್ನೂ ಕಾಯುತ್ತಿದೆ. ಎಂಎಸ್ಪಿ ಸಮಿತಿಗೆ ನಾವು ರೈತ ಸಂಘಗಳಿಂದ 2-3 ಸದಸ್ಯರ ಹೆಸರನ್ನು ಕೇಳಿದ್ದೇವೆ. ನಮಗೆ ಇನ್ನೂ ಯಾವುದೇ ಹೆಸರುಗಳು ಬಂದಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಸಮಿತಿ ರಚನೆಯಲ್ಲಿ ಯಾವುದೇ ವಿಳಂಬವಾಗಿಲ್ಲ. ಸರ್ಕಾರ ಈಗಲೂ ಸಮಿತಿ ರಚನೆಗೆ ಉತ್ಸುಕವಾಗಿದ್ದು, ರೈತ ಸಂಘಗಳನ್ನು ಪ್ರತಿನಿಧಿಸುವ 2-3 ಸದಸ್ಯರ ಹೆಸರನ್ನು ಕೇಂದ್ರ ಸರ್ಕಾರವು ಪಡೆದ ನಂತರ ಎಂಎಸ್ಪಿ ಕುರಿತು ಸಮಿತಿಯನ್ನು ಶೀಘ್ರದಲ್ಲೇ ರಚಿಸಲಾಗುವುದು ಎಂದು ಹೇಳಿದರು.
ಕಳೆದ ತಿಂಗಳು, ತೋಮರ್ ಲೋಕಸಭೆಗೆ ಲಿಖಿತ ಉತ್ತರದಲ್ಲಿ ಸರ್ಕಾರವು ಎಂಎಸ್ಪಿ ಸಮಿತಿಯನ್ನು ರಚಿಸುವ ಪ್ರಕ್ರಿಯೆಯಲ್ಲಿದೆ ಎಂದು ಹೇಳಿದ್ದರು. ಸಮಿತಿಯಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ರೈತರು, ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಅರ್ಥಶಾಸ್ತ್ರಜ್ಞರ ಪ್ರತಿನಿಧಿಗಳು ಇರುತ್ತಾರೆ ಎನ್ನಲಾಗಿದೆ.
ಕಳೆದ ವರ್ಷ ನವೆಂಬರ್ನಲ್ಲಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ, ಎಂಎಸ್ಪಿ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕವಾಗಿಸಲು ಸಮಿತಿಯನ್ನು ರಚಿಸಲಾಗುವುದು ಮತ್ತು ಶೂನ್ಯ ಬಜೆಟ್ ಆಧಾರಿತ ಕೃಷಿಯನ್ನು ಉತ್ತೇಜಿಸುವ ಮಾರ್ಗಗಳನ್ನು ಸೂಚಿಸಲಾಗುವುದು ಎಂದು ಭರವಸೆ ನೀಡಿದ್ದರು.