ಜಮ್ಮು-ಕಾಶ್ಮೀರ: ಸೇನೆ ದತ್ತು ಪಡೆದ ಕುಗ್ರಾಮದಲ್ಲಿ ಕೋವಿಡ್-19 ಲಸಿಕೆ ನೀಡಿಕೆಯಲ್ಲಿ ಶೇ. 100 ರಷ್ಟು ಸಾಧನೆ!
ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚಿಂಗಮ್ ಗ್ರಾಮ ಶೇಕಡಾ 100 ರಷ್ಟು ಕೋವಿಡ್ ಲಸಿಕೆ ನೀಡಿದ ಮೊದಲ ಕುಗ್ರಾಮವಾಗಿದೆ ಎಂದು ಸೇನೆ ಶನಿವಾರ ತಿಳಿಸಿದೆ.
Published: 16th April 2022 08:19 PM | Last Updated: 16th April 2022 08:19 PM | A+A A-

ಸಾಂದರ್ಭಿಕ ಚಿತ್ರ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚಿಂಗಮ್ ಗ್ರಾಮ ಶೇಕಡಾ 100 ರಷ್ಟು ಕೋವಿಡ್ ಲಸಿಕೆ ನೀಡಿದ ಮೊದಲ ಕುಗ್ರಾಮವಾಗಿದೆ ಎಂದು ಸೇನೆ ಶನಿವಾರ ತಿಳಿಸಿದೆ.
ಕಿಶ್ತ್ವಾರ್ ದಿಂದ 50 ಕಿಲೋ ಮೀಟರ್ ದೂರದಲ್ಲಿರುವ ಈ ಗ್ರಾಮವನ್ನು ಜನರ ಕಷ್ಟ ಕಡಿಮೆ ಮಾಡಲು ಮತ್ತು ಕೋವಿಡ್ -19 ಶಿಷ್ಟಾಚಾರ ಅನುಷ್ಠಾನಕ್ಕಾಗಿ ಸೇನೆಯು ದತ್ತು ತೆಗೆದುಕೊಂಡಿದೆ. ಹೀಗೆ ಜನರ ಅಮೂಲ್ಯ ಜೀವವನ್ನು ಉಳಿಸಲಾಗುತ್ತಿದೆ ಮತ್ತು ವೈರಸ್ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಮ್ಮು ಮೂಲದ ಸೇನೆ ಪಿಆರ್ ಒ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ಹೇಳಿದ್ದಾರೆ.
ಸೇನೆ, ನಾಗರಿಕ ಆಡಳಿತ ಮತ್ತು ಜನರ ಸಮರ್ಪಿತ ಪ್ರಯತ್ನದಿಂದಾಗಿ ಚಿಂಗಮ್ ಗ್ರಾಮ ಕೋವಿಡ್-19 ಲಸಿಕೆ ನೀಡಿಕೆಯಲ್ಲಿ ಶೇಕಡಾ 100 ರಷ್ಟು ಸಾಧನೆಯೊಂದಿಗೆ ಮಾದರಿ ಗ್ರಾಮವಾಗಿ ಹೊರಹೊಮ್ಮಿದೆ ಎಂದು ಅವರು ತಿಳಿಸಿದ್ದಾರೆ. 12 ರಿಂದ 14 ವರ್ಷದೊಳಗಿನ ಮಕ್ಕಳನ್ನು ಒಳಗೊಂಡಂತೆ ಲಸಿಕೆ ನೀಡಿಕೆಯಲ್ಲಿ ಚಿಂಗಮ್ ಗ್ರಾಮ ಈ ಭಾಗದಲ್ಲಿ ಶೇಕಡ 100 ರಷ್ಟು ಸಾಧನೆ ಗುರಿ ಮುಟ್ಟಿದ ಮೊದಲ ಗ್ರಾಮವಾಗಿದೆ ಎಂದು ಲೆಫ್ಟಿನೆಂಟ್ ಕರ್ನಲ್ ಹೇಳಿದ್ದಾರೆ.
ಕಿಶ್ತ್ವಾರ್ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಅತಿದೊಡ್ಡ ಜಿಲ್ಲೆಯಾಗಿದೆ. ಇಲ್ಲಿ ಮೂಲಭೂತ ವೈದ್ಯಕೀಯ ಸೌಲಭ್ಯಗಳು ಸೀಮಿತ ಪ್ರಮಾಣದಲ್ಲಿದ್ದು, ಹೆಚ್ಚಿನ ಸಂಖ್ಯೆಯ ಕುಗ್ರಾಮಗಳನ್ನು ಒಳಗೊಂಡಿದೆ. ಕೋವಿಡ್-19 ಉಂಟು ಮಾಡಿದ ಸವಾಲುಗಳೊಂದಿಗೆ ಸ್ಥಳೀಯ ಜನರಿಗೆ ಅರಿವು ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸುವತ್ತಾ ಗಮನ ಹರಿಸಲಾಗಿತ್ತು ಎಂದು ಸೇನೆ ಪಿಆರ್ ಒ ಹೇಳಿದ್ದಾರೆ.
ಸ್ಥಳೀಯ ಜನರಲ್ಲಿ ಅರಿವು ಮೂಡಿಸುವುದನ್ನು ಮುಂದುವರೆಸಿದ್ದರಿಂದ ಕೋವಿಡ್-19 ಪ್ರಕರಣಗಳ ಸಂಖ್ಯೆ ಶೂನ್ಯವಾಗಿರುವುದಾಗಿ ಅವರು ತಿಳಿಸಿದ್ದಾರೆ.