ಕ್ಷಮಾಪಣೆ ಕೇಳಬೇಡಿ: ಆಕರ್ ಪಟೇಲ್ ವಿರುದ್ಧದ ಲುಕ್ ಔಟ್ ನೋಟಿಸ್ ವಾಪಸ್ ಪಡೆಯಿರಿ - ಸಿಬಿಐಗೆ ಕೋರ್ಟ್ ಆದೇಶ!
ಆಮ್ನೆಸ್ಟಿ ಇಂಡಿಯಾದ ಮಾಜಿ ಮುಖ್ಯಸ್ಥ ಆಕರ್ ಪಟೇಲ್ ವಿರುದ್ಧ ಹೊರಡಿಸಲಾಗಿದ್ದ ಲುಕ್ ಔಟ್ ಸುತ್ತೋಲೆಯನ್ನು ಹಿಂಪಡೆಯುವಂತೆ ದೆಹಲಿ ಕೋರ್ಟ್ ಕೇಂದ್ರ ತನಿಖಾ ದಳ(ಸಿಬಿಐ) ಗೆ ಸೂಚಿಸಿದೆ.
Published: 16th April 2022 08:06 PM | Last Updated: 16th April 2022 08:06 PM | A+A A-

ಆಕರ್ ಪಟೇಲ್
ನವದೆಹಲಿ: ಆಮ್ನೆಸ್ಟಿ ಇಂಡಿಯಾದ ಮಾಜಿ ಮುಖ್ಯಸ್ಥ ಆಕರ್ ಪಟೇಲ್ ವಿರುದ್ಧ ಹೊರಡಿಸಲಾಗಿದ್ದ ಲುಕ್ ಔಟ್ ಸುತ್ತೋಲೆಯನ್ನು ಹಿಂಪಡೆಯುವಂತೆ ದೆಹಲಿ ಕೋರ್ಟ್ ಕೇಂದ್ರ ತನಿಖಾ ದಳ (ಸಿಬಿಐ) ಗೆ ಸೂಚಿಸಿದೆ.
ನರೇಂದ್ರ ಮೋದಿ ಸರ್ಕಾರವನ್ನ ಕಟುವಾಗಿ ಟೀಕಿಸಿದ್ದ, ಮಾನವ ಹಕ್ಕುಗಳ ಪ್ರಚಾರಕ ಆಕರ್ ಪಟೇಲ್ ಬಳಿ ಈ ಹಿಂದೆ ವಿಚಾರಣಾ ನ್ಯಾಯಾಲಯದ ನಿರ್ದೇಶನದಂತೆ ಸಿಬಿಐ ಕ್ಷಮೆಯಾಚಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹಿಂದಿನ ಕೋರ್ಟ್ ಆದೇಶವನ್ನ ಎತ್ತಿಹಿಡಿದಿದೆ.
ಏಪ್ರಿಲ್ 6 ರಂದು ಆಕರ್ ಪಟೇಲ್ ಯಎಸ್ ಗೆ ಪ್ರಯಾಣಿಸಲು ಅನುಮತಿಸಿ, ಲುಕ್ಔಟ್ ಸುತ್ತೋಲೆಯನ್ನ ತಕ್ಷಣ ಕೈಬಿಡುವಂತೆ ಸಿಬಿಐಗೆ ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು. ಜೊತೆಗೆ ಆಕರ್ ಪಟೇಲ್ ಬಳಿ ಸಿಬಿಐ ಲಿಖಿತ ಕ್ಷಮೆಯಾಚನೆ ಮಾಡುವಂತೆ ಸೂಚಿಸಿತ್ತು.
ನ್ಯಾಯಾಲಯದ ಆದೇಶದ ನಂತರ ಆಕರ್ ಪಟೇಲ್ ವಿಮಾನ ನಿಲ್ದಾಣಕ್ಕೆ ಹೋದಾಗ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮತ್ತೆ ತಡೆಯಲಾಯಿತು. ಕೋರ್ಟ್ ಆದೇಶದ ಬಳಿಕವೂ ತಮ್ಮನ್ನು ವಿದೇಶಕ್ಕೆ ಹೋಗದಂತೆ ತಡೆಯಲಾಗಿದೆ ಎಂದು ಆಕರ್ ಪಟೇಲ್ ಸಿಬಿಐ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು.
ಅಮ್ನೆಸ್ಟಿ ಇಂಡಿಯಾ ಸಂಸ್ಥೆ ಮೇಲೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ(FCRA) ನಿಯಮಗಳ ಉಲ್ಲಂಘನೆ ಮಾಡಿದ ಆರೋಪವಿದೆ. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದೆ. ಅಮ್ನೆಸ್ಟಿ ಇಂಡಿಯಾದ ಮುಖ್ಯಸ್ಥರಾಗಿದ್ದ ಆಕರ್ ಪಟೇಲ್ ವಿದೇಶಕ್ಕೆ ಹಾರದಂತೆ ಸಿಬಿಐ ಲುಕೌಟ್ ಸುತ್ತೋಲೆ ಹೊರಡಿಸಿತ್ತು. ವಿದೇಶಕ್ಕೆ ಹೋಗದಂತೆ ನಿರ್ಬಂಧಿಸಲು ಲುಕೌಟ್ ಸುತ್ತೋಲೆ ನೀಡಲಾಗುತ್ತದೆ.