ಉತ್ತರ ಪ್ರದೇಶ: ಒಂದೇ ಕುಟುಂಬದ ಐವರು ಸಾವು; ಪತ್ನಿ, ಮಕ್ಕಳನ್ನು ಕೊಲೆ ಮಾಡಿ ವ್ಯಕ್ತಿ ಆತ್ಮಹತ್ಯೆ ಶಂಕೆ
ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನವಾಬ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಖಗಲ್ಪುರ ಗ್ರಾಮದಲ್ಲಿ ಶುಕ್ರವಾರ...
Published: 16th April 2022 07:26 PM | Last Updated: 16th April 2022 07:26 PM | A+A A-

ಒಂದೇ ಕುಟುಂಬದ ಐವರು ಸಾವು
ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನವಾಬ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಖಗಲ್ಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯ ಯಜಮಾನ ರಾಹುಲ್(42), ಅವರ ಪತ್ನಿ ಪ್ರೀತಿ(38) ಮತ್ತು ಅವರ ಪುತ್ರಿಯರಾದ ಮಹಿ(15), ಪಿಹು(13) ಮತ್ತು ಕುಹು(11) ಅವರು ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಅಗರ್ವಾಲ್ ಅವರು ತಿಳಿಸಿದ್ದಾರೆ. ವಿಧಿವಿಜ್ಞಾನ ತಂಡ ಹಾಗೂ ಶ್ವಾನ ದಳ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ.
ಇದನ್ನು ಓದಿ: ಉತ್ತರ ಪ್ರದೇಶ: ಹಿಂದೂ ಮಹಿಳೆ ಅಪಹರಣ ಆರೋಪ, ಮುಸ್ಲಿಂ ವ್ಯಕ್ತಿ ಮನೆಗೆ ಬೆಂಕಿ ಹಚ್ಚಿದ ಬಲ ಪಂಥೀಯರು!
ಬೆಳಗ್ಗೆ 7.30ರ ಸುಮಾರಿಗೆ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ವೇಳೆ ಮನೆಯ ಮಾಲೀಕ ರಾಹುಲ್ ಅವರ ಶವ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಅದರಲ್ಲಿ ಯಾವುದೇ ಗಾಯದ ಗುರುತುಗಳಿರಲಿಲ್ಲ. ಮೇಲ್ನೋಟಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರುವಂತಿದೆ.
ರಾಹುಲ್ ಅವರ ಪತ್ನಿ ಮತ್ತು ಅವರ ಮೂವರು ಪುತ್ರಿಯರ ಮೃತದೇಹದ ಮೇಲೆ ಗಾಯದ ಗುರುತುಗಳಿದ್ದು, ರಾಹುಲ್ ತನ್ನ ಪತ್ನಿ ಮಕ್ಕಳನ್ನು ಹರಿತವಾದ ಆಯುಧದಿಂದ ಕತ್ತು ಸೀಳಿ ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮನೆ ಯಜಮಾನ ಕುಟುಂಬದ ಸದಸ್ಯರನ್ನ ಕೊಲೆ ಮಾಡಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವಂತೆ ಮೇಲ್ನೋಟಕ್ಕೆ ತಿಳಿದುಬಂದಿದೆ. ಪ್ರಕರಣದ ತನಿಖೆಗಾಗಿ ಏಳು ತಂಡಗಳನ್ನು ರಚಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ(ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಘಟನೆಯ ಕುರಿತು ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜ್ಯವು ಅಪರಾಧದಲ್ಲಿ ಮುಳುಗಿದೆ ಎಂದು ಹೇಳಿದ್ದಾರೆ.