ಪಶ್ಚಿಮ ಬಂಗಾಳ ಉಪ ಚುನಾವಣೆ: ಟಿಎಂಸಿ ನಾಯಕರಾದ ಶತ್ರುಘ್ನ ಸಿನ್ಹಾ, ಬಾಬುಲ್ ಸುಪ್ರಿಯೊ ಭರ್ಜರಿ ಗೆಲುವು
ಜನರು ಬಿಜೆಪಿಯ ಅಹಂಕಾರವನ್ನು ನಾಶಪಡಿಸಿದ್ದಾರೆ ಎಂದು ಪಶ್ಚಿಮ ಬಂಗಾಳದ ಬ್ಯಾಲಿಗುಂಗೆ ವಿಧಾನಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ತೃಣಮೂಲ ಕಾಂಗ್ರೆಸ್(ಟಿಎಂಸಿ) ಅಭ್ಯರ್ಥಿ ಬಾಬುಲ್...
Published: 16th April 2022 05:15 PM | Last Updated: 16th April 2022 05:16 PM | A+A A-

ಶತ್ರುಘ್ನ ಸಿನ್ಹಾ
ಕೊಲ್ಕತ್ತಾ: ಜನರು ಬಿಜೆಪಿಯ ಅಹಂಕಾರವನ್ನು ನಾಶಪಡಿಸಿದ್ದಾರೆ ಎಂದು ಪಶ್ಚಿಮ ಬಂಗಾಳದ ಬ್ಯಾಲಿಗುಂಗೆ ವಿಧಾನಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ತೃಣಮೂಲ ಕಾಂಗ್ರೆಸ್(ಟಿಎಂಸಿ) ಅಭ್ಯರ್ಥಿ ಬಾಬುಲ್ ಸುಪ್ರಿಯೊ ಅವರು ಶನಿವಾರ ಹೇಳಿದ್ದಾರೆ.
ಬ್ಯಾಲಿಗುಂಗೆ ಉಪ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಬಾಬುಲ್ ಸುಪ್ರಿಯೊ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿಪಿಐ(ಎಂ) ಸೈರಾ ಶಾ ಹಲೀಮ್ ಅವರನ್ನು 20,228 ಮತಗಳ ಅಂತರದಿಂದ ಸೋಲಿಸಿದ್ದಾರೆ. ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಸುಪ್ರಿಯೊ ಅವರು, ಅಸನ್ಸೋಲ್ ನಲ್ಲಿ ಟಿಎಂಸಿ ಗೆದ್ದಿರುವುದು ನ್ಯಾಯಸಮ್ಮತವಾಗಿದೆ. ಈ ಹಿಂದೆ ಅಸನ್ಸೋಲ್ ಲೋಕಸಭಾ ಕ್ಷೇತ್ರದಲ್ಲಿ ನಾನು ನನ್ನ ಸ್ವಂತ ಕ್ರೆಡಿಟ್‌ನಿಂದ ಗೆದ್ದಿದ್ದೇನು. ಬಿಜೆಪಿ ಬಲದಿಂದ ಅಲ್ಲ. ಇಂದು ಬಿಜೆಪಿಯ ಅಹಂಕಾರವನ್ನು ಜನ ನಾಶ ಮಾಡಿದ್ದಾರೆ. ಗೆಲುವಿನ ಶ್ರೇಯಸ್ಸು ಮಮತಾ ಬ್ಯಾನರ್ಜಿ ಅವರಿಗೆ ಸಲ್ಲುತ್ತದೆ ಎಂದರು.
ಏತನ್ಮಧ್ಯೆ, ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಅವರು 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಟ್ವಿಟರ್‌ನಲ್ಲಿ ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ನಿರ್ಣಾಯಕ ಜನಾದೇಶ ನೀಡಿದ್ದಕ್ಕಾಗಿ ಅಸನ್ಸೋಲ್ ಸಂಸದೀಯ ಕ್ಷೇತ್ರ ಮತ್ತು ಬ್ಯಾಲಿಗುಂಗೆ ವಿಧಾನಸಭಾ ಕ್ಷೇತ್ರದ ಮತದಾರರಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಬ್ಯಾಲಿಗುಂಗೆ ಪ್ರತಿನಿಧಿಸಿದ್ದ ರಾಜ್ಯ ಸಚಿವ ಸುಬ್ರತಾ ಮುಖರ್ಜಿ ಕಳೆದ ವರ್ಷ ನಿಧನರಾದರು. ಅವರಿಂದ ತೆರವಾದ ಸ್ಥಾನಕ್ಕೆ ಬಿಜೆಪಿ ತೊರೆದು ಟಿಎಂಸಿ ಸೇರಿದ ಬಾಬುಲ್ ಸುಪ್ರಿಯೊಗೆ ಟಿಎಂಸಿ ಟಿಕೆಟ್ ನೀಡಲಾಗಿತ್ತು. ಇನ್ನೂ ಸುಪ್ರಿಯೊ ಅವರು ಅಸನ್ಸೋಲ್‌ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಏಪ್ರಿಲ್ 12 ರಂದು ಉಪಚುನಾವಣೆ ನಡೆದಿತ್ತು.