ಟ್ವೀಟ್ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಬಂಧನ: ಗುಜರಾತ್ ನಿಂದ ಅಸ್ಸಾಂಗೆ ಕರೆತಂದ ಪೊಲೀಸರು
ಟ್ವೀಟ್ ವಿಚಾರಕ್ಕೆ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೆವಾನಿಯನ್ನು ಕಳೆದ ರಾತ್ರಿ ಬಂಧಿಸಿದ ಅಸ್ಸಾಂ ಪೊಲೀಸರು ನಂತರ ವಿಮಾನದಲ್ಲಿ ಗುಜರಾತ್ ನ ಪಲಂಪುರ್ ಪಟ್ಟಣದಿಂದ ಕರೆದೊಯ್ದರು.
Published: 21st April 2022 12:17 PM | Last Updated: 21st April 2022 12:17 PM | A+A A-

ಜಿಗ್ನೇಶ್ ಮೇವಾನಿ
ಅಹ್ಮದಾಬಾದ್: ಟ್ವೀಟ್ ವಿಚಾರಕ್ಕೆ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೆವಾನಿಯನ್ನು ಕಳೆದ ರಾತ್ರಿ ಬಂಧಿಸಿದ ಅಸ್ಸಾಂ ಪೊಲೀಸರು ನಂತರ ವಿಮಾನದಲ್ಲಿ ಗುಜರಾತ್ ನ ಪಲಂಪುರ್ ಪಟ್ಟಣದಿಂದ ಕರೆದೊಯ್ದರು.
ಭಾರತೀಯ ದಂಡ ಸಂಹಿತೆ ಸೆಕ್ಷನ್ 153ಎ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ ನಂತರ ದಲಿತ ನಾಯಕ ಜಿಗ್ನೇಶ್ ಮೆವಾನಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂನ ಕೊಕ್ರಜರ್ ಪೊಲೀಸ್ ಠಾಣೆಯಲ್ಲಿ ಪ್ರಮುಖ ಸಮುದಾಯಗಳ ನಡುವಿನ ಕಲಹಕ್ಕೆ ಸಂಬಂಧಿಸಿದಂತೆ ಕೇಸು ದಾಖಲಿಸಲಾಗಿದೆ ಎಂದು ಆತನ ಸಹಚರ ಸುರೇಶ್ ಜಾಟ್ ತಿಳಿಸಿದ್ದಾರೆ.
ಅಸ್ಸಾಂ ಪೊಲೀಸ್ ಅಧಿಕಾರಿಗಳು ಹಂಚಿಕೊಂಡ ದಾಖಲೆಯ ಪ್ರಕಾರ, ಕೆಲವು ದಿನಗಳ ಹಿಂದೆ ಮೇವಾನಿ ಮಾಡಿದ ಟ್ವೀಟ್ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಆದರೆ, ಟ್ವೀಟ್ ಅನ್ನು ಟ್ವಿಟರ್ ತಡೆಹಿಡಿದಿದೆ. ಅದು ನಾಥೂರಾಂ ಗೋಡ್ಸೆಯ ಬಗ್ಗೆ ಮೆವಾನಿ ಮಾಡಿದ್ದ ಟ್ವೀಟ್ ಆಗಿತ್ತು. ಮೆವಾನಿ ಅವರನ್ನು ಮೊದಲು ರಸ್ತೆಯ ಮೂಲಕ ಅಹಮದಾಬಾದ್ಗೆ ಕರೆತರಲಾಯಿತು. ಇಂದು ಮುಂಜಾನೆ ವಿಮಾನದ ಮೂಲಕ ಅಸ್ಸಾಂಗೆ ಕರೆದೊಯ್ಯಲಾಯಿತು ಎಂದು ತಿಳಿಸಿದ್ದಾರೆ.
ಮೇವಾನಿ ಬನಸ್ಕಾಂತದ ವಡ್ಗಾಮ್ ಕ್ಷೇತ್ರದಿಂದ ಸ್ವತಂತ್ರ ಶಾಸಕರಾಗಿದ್ದು, ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ್ದರು. ನಿನ್ನೆ ಬುಧವಾರ ರಾತ್ರಿ 11:30ಕ್ಕೆ ಪಾಲನ್ಪುರ ಸರ್ಕ್ಯೂಟ್ ಹೌಸ್ನಿಂದ ಅಸ್ಸಾಂ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಮೇವಾನಿ ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಇವರ ಬಂಧನದ ವಿಚಾರ ತಿಳಿದ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್ ಮತ್ತು ಇತರ ಕಾಂಗ್ರೆಸ್ ನಾಯಕರು ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಧಾವಿಸಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.