ಭಯೋತ್ಪಾದನೆ ಮಾನವ ಹಕ್ಕು ಉಲ್ಲಂಘನೆಯ ಅತಿದೊಡ್ಡ ರೂಪವಾಗಿದೆ: ಅಮಿತ್ ಶಾ
ಭಯೋತ್ಪಾದನೆ ಮಾನವ ಹಕ್ಕುಗಳ ಉಲ್ಲಂಘನೆಯ ಅತಿದೊಡ್ಡ ರೂಪವಾಗಿದ್ದು ಮಾನವ ಹಕ್ಕುಗಳನ್ನು ರಕ್ಷಿಸಲು ಈ ಪಿಡುಗನ್ನು ಬುಡಸಮೇತ ಕಿತ್ತುಹಾಕಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Published: 21st April 2022 12:43 PM | Last Updated: 21st April 2022 01:14 PM | A+A A-

ಅಮಿತ್ ಶಾ
ನವದೆಹಲಿ: ಭಯೋತ್ಪಾದನೆ ಮಾನವ ಹಕ್ಕುಗಳ ಉಲ್ಲಂಘನೆಯ ಅತಿದೊಡ್ಡ ರೂಪವಾಗಿದ್ದು ಮಾನವ ಹಕ್ಕುಗಳನ್ನು ರಕ್ಷಿಸಲು ಈ ಪಿಡುಗನ್ನು ಬುಡಸಮೇತ ಕಿತ್ತುಹಾಕಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯ 13ನೇ ಸಂಸ್ಥಾಪನಾ ದಿನವನ್ನುದ್ದೇಶಿಸಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಧಿಯ ವಿರುದ್ಧ ದಾಖಲಾದ ಪ್ರಕರಣಗಳು ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡಿದೆ ಎಂದರು.
ಭಯೋತ್ಪಾದನೆಗಿಂತ ದೊಡ್ಡ ಮಾನವ ಹಕ್ಕುಗಳ ಉಲ್ಲಂಘನೆ ಇರಲಾರದು ಎಂದು ನಾನು ನಂಬುತ್ತೇನೆ. ಭಯೋತ್ಪಾದನೆ ಮಾನವ ಹಕ್ಕುಗಳ ಉಲ್ಲಂಘನೆಯ ದೊಡ್ಡ ರೂಪವಾಗಿದೆ. ಮಾನವ ಹಕ್ಕುಗಳನ್ನು ರಕ್ಷಿಸಲು ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯುವುದು ಅತ್ಯಗತ್ಯ ಎಂದರು.
ನರೇಂದ್ರ ಮೋದಿ ಸರ್ಕಾರವು ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣು ನೀತಿಯನ್ನು ಅಳವಡಿಸಿಕೊಂಡಿದೆ. ಭಾರತದಿಂದ ಭಯೋತ್ಪಾದನೆ ಬೆದರಿಕೆಯನ್ನು ಬೇರುಸಹಿತ ಕಿತ್ತೊಗೆಯಲು ಕೆಲಸ ಮಾಡುತ್ತಿದೆ. ಎನ್ಐಎ ದಾಖಲಿಸಿರುವ ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದಕ ನಿಧಿ ಪ್ರಕರಣಗಳ ಕಾರಣ, ಅಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಹಣವನ್ನು ಒದಗಿಸುವುದು ಈಗ ತುಂಬಾ ಕಷ್ಟಕರವಾಗಿದೆ ಎಂದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳ ಭೂಗತರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಕ್ಕಾಗಿ ಮತ್ತು ಅಲ್ಲಿ ಭಯೋತ್ಪಾದನೆಗೆ ವಸ್ತುಗಳು, ಹಣಗಳನ್ನು ಒದಗಿಸುವ ಕೊಂಡಿಗಳನ್ನು ನಿಗ್ರಹಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಗೃಹ ಸಚಿವರು ಅಭಿನಂದನೆ ಸಲ್ಲಿಸಿದರು.