
ಲಂಕಾ ತಮಿಳು ವಲಸಿಗರು ವಶಕ್ಕೆ!
ಚೆನ್ನೈ: ಗರ್ಭಿಣಿ ಮಹಿಳೆ, 7 ಮಕ್ಕಳು ಸೇರಿ 18 ಶ್ರೀಲಂಕಾ ಮೂಲದ ತಮಿಳು ವಲಸಿಗರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಆರ್ಥಿಕ ಬಿಕ್ಕಟ್ಟು ಪೀಡಿತ ದ್ವೀಪ ರಾಷ್ಟ್ರದಲ್ಲಿ ಜೀವನ ನಡೆಸಲು ಹೆಣಗಾಡುತ್ತಿರುವ ಶ್ರೀಲಂಕಾ ಪ್ರಜೆಗಳು ಇದೀಗ ಭಾರತದತ್ತ ಮುಖ ಮಾಡಿದ್ದು, ಈ ಪೈಕಿ ಇಂದು 4 ತಿಂಗಳ ಗರ್ಭಿಣಿ ಮಹಿಳೆ ಮತ್ತು ಒಂದೂವರೆ ವರ್ಷದ ಮಗು ಸೇರಿದಂತೆ ಸುಮಾರು 18 ಶ್ರೀಲಂಕಾ ತಮಿಳ ವಲಸಿಗರು ಗುರುವಾರ ತಡರಾತ್ರಿ ರಾಮೇಶ್ವರಂಗೆ ಎರಡು ಬ್ಯಾಚ್‌ಗಳಲ್ಲಿ ಆಗಮಿಸಿದ್ದಾರೆ.
ಶ್ರೀಲಂಕಾವು ನಿರುದ್ಯೋಗ ಮತ್ತು ಭಾರೀ ಹಣದುಬ್ಬರ ಸಮಸ್ಯೆಗಳಿಗೆ ಕಾರಣವಾದ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂತಹ ಸಂಕಷ್ಟಗಳಿಂದಾಗಿ ಶ್ರೀಲಂಕಾದವರು, ಅದರಲ್ಲೂ ಮುಖ್ಯವಾಗಿ ಲಂಕಾ ತಮಿಳರು ಅಕ್ರಮವಾಗಿ ಚಿಕ್ಕ ದೋಣಿಗಳಲ್ಲಿ ರಾಮೇಶ್ವರಂಗೆ ತೆರಳಿ ಭಾರತದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಮಾರ್ಚ್ 22 ರಿಂದ ಇಲ್ಲಿಯವರೆಗೆ, ಸುಮಾರು 60 ಶ್ರೀಲಂಕಾ ತಮಿಳರು (ಗುರುವಾರ ತಡವಾಗಿ ಬಂದ 18 ಮಂದಿ ಸೇರಿದಂತೆ) ಆಶ್ರಯ ಪಡೆಯಲು ಎಂಟು ಬ್ಯಾಚ್‌ಗಳಲ್ಲಿ ರಾಮೇಶ್ವರಂಗೆ ಬಂದಿದ್ದಾರೆ ಎನ್ನಲಾಗಿದೆ.
ಮೊದಲ ಬ್ಯಾಚ್‌ನಲ್ಲಿ ಶ್ರೀಲಂಕಾದ ಮನ್ನಾರ್ ಪ್ರದೇಶಕ್ಕೆ ಸೇರಿದ ಗರ್ಭಿಣಿ ಮಹಿಳೆ ಮತ್ತು ಒಂದೂವರೆ ವರ್ಷದ ಮಗು ಸೇರಿದಂತೆ 13 ಶ್ರೀಲಂಕಾ ತಮಿಳರು ಇದ್ದರು. ಗುರುವಾರ ಬೆಳಗ್ಗೆ ಮನ್ನಾರ್ ಮೀನುಗಾರಿಕಾ ಬಂದರಿನಿಂದ ಹೊರಟು ಗುರುವಾರ ತಡರಾತ್ರಿ ಎರಡು ದೋಣಿಗಳಲ್ಲಿ ಅಕ್ರಮವಾಗಿ ಧನುಷ್ಕೋಡಿಯ ಅರಿಚಲ್ ಮುನೈಗೆ ಬಂದರು ಎಂದು ವರದಿಯಾಗಿದೆ. ಈ ಮಾಹಿತಿ ಪಡೆದ ಮೆರೈನ್ ಪೊಲೀಸ್ ಅಧಿಕಾರಿಗಳು ಅವರನ್ನು ಮೆರೈನ್ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ದಿವಾಳಿತನ ಅಂಚಿನಲ್ಲಿ ದ್ವೀಪರಾಷ್ಟ್ರ; ಅಧ್ಯಕ್ಷರ ಅಧಿಕಾರ ಮೊಟಕು: ಶ್ರೀಲಂಕಾ ಪ್ರಧಾನಿ ಹೇಳಿಕೆ
ವರದಿಯ ಪ್ರಕಾರ, ಎರಡನೇ ಬ್ಯಾಚ್‌ನಲ್ಲಿ 5 ಶ್ರೀಲಂಕಾ ತಮಿಳರು ಇದ್ದರು. ಜಾಫ್ನಾದಿಂದ ಹೊರಟಿದ್ದ ಶ್ರೀಲಂಕಾದ ಜಾಫ್ನಾ ಪ್ರದೇಶಕ್ಕೆ ಸೇರಿದ ಕೆಲವು ಕುಟುಂಬಗಳು ಶುಕ್ರವಾರ ನಸುಕಿನಲ್ಲಿ ರಾಮೇಶ್ವರಂ ಬಳಿಯ ಚೇರನ್‌ಕೊಟ್ಟೈ ತೀರಕ್ಕೆ ಬಂದಿವೆ. ಚೇರನ್‌ಕೊಟ್ಟೈ ತೀರದಲ್ಲಿ ಕುಟುಂಬ ನಿಂತಿರುವ ಬಗ್ಗೆ ಮಾಹಿತಿ ಪಡೆದ ಮೆರೈನ್ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ವಿಚಾರಣೆಗಾಗಿ ರಾಮೇಶ್ವರಂನ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ತಮಿಳುನಾಡು ಸರ್ಕಾರ ನೀಡಿದ ಸಲಹೆಯಂತೆ ಸೆರೆ ಸಿಕ್ಕ ವಲಸಿಗರನ್ನು ದಿನದ ನಂತರ ಮಂಡಪಂ ನಿರಾಶ್ರಿತರ ಶಿಬಿರದಲ್ಲಿ ಇರಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪ್ರಸ್ತುತ ಮಂಡಪಂ ನಿರಾಶ್ರಿತರ ಶಿಬಿರದಲ್ಲಿ 42 ವಲಸಿಗರು ನೆಲೆಸಿದ್ದಾರೆ. ಈಗಿನ 18 ವಲಸಿಗರನ್ನೂ ಸೇರಿಸಿದರೆ, ಭಾರತಕ್ಕೆ ಆಗಮಿಸಿದ ಒಟ್ಟು ಶ್ರೀಲಂಕಾ ವಲಸಿಗರ ಸಂಖ್ಯೆ 60 ಕ್ಕೆ ಏರಿಕೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.