ಡೊರಾಂಡಾ ಖಜಾನೆ ಮೇವು ಹಗರಣ ಪ್ರಕರಣ: ಲಾಲೂ ಪ್ರಸಾದ್ ಯಾದವ್ ಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ಮಂಜೂರು
ಡೊರಾಂಡಾ ಖಜಾನೆ ಮೇವು ಹಗರಣ ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ಗೆ ಜಾಮೀನು ನೀಡಿದೆ,.
Published: 22nd April 2022 01:43 PM | Last Updated: 22nd April 2022 01:49 PM | A+A A-

ಲಾಲೂ ಪ್ರಸಾದ್ ಯಾದವ್
ರಾಂಚಿ: ಡೊರಾಂಡಾ ಖಜಾನೆ ಮೇವು ಹಗರಣ ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ಗೆ ಜಾಮೀನು ನೀಡಿದೆ. ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಲಾಲೂ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅನಾರೋಗ್ಯ ಹಿನ್ನೆಲೆಯಲ್ಲಿ ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಮೇವು ಹಗರಣದಲ್ಲಿ ಲಾಲು ಪ್ರಸಾದ್ ಯಾದವ್ ವಿರುದ್ಧದ ಐದನೇ ಮತ್ತು ಅಂತಿಮ ಪ್ರಕರಣವಾದ 139.5 ಕೋಟಿ ರೂಪಾಯಿಗಳ ಡೊರಾಂಡಾ ಖಜಾನೆ ಅವ್ಯವಹಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿದೆ. ಫೆಬ್ರವರಿಯಲ್ಲಿ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದ ಅಪರಾಧಿಗಳಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಕೂಡ ಒಳಗೊಂಡಿದ್ದರು.
ಮೇವು ಹಗರಣ ಪ್ರಕರಣದಲ್ಲಿ 99 ಆರೋಪಿಗಳ ಪೈಕಿ 24 ಮಂದಿಯನ್ನು ಖುಲಾಸೆಗೊಳಿಸಲಾಗಿದ್ದು, 46 ಮಂದಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಮೇವು ಹಗರಣ ಪ್ರಕರಣಗಳಲ್ಲಿ ಲಾಲೂ ಪ್ರಸಾದ್ ಯಾದವ್ ಅವರಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅವರು ಬಿಹಾರದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಡೊರಾಂಡಾ ಖಜಾನೆಯಿಂದ 139.35 ಕೋಟಿ ರೂಪಾಯಿಗಳನ್ನು ಹಿಂತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ಪ್ರಕರಣ ದಾಖಲಾಗಿತ್ತು. ಮತ್ತೆ ಶಿಕ್ಷೆಗೆ ಗುರಿಯಾದಾಗ ಜಾಮೀನಿನ ಮೇಲೆ ಹೊರಗಿದ್ದರು.
22 ವರ್ಷಗಳ ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ, 55 ಆರೋಪಿಗಳು ಅಸುನೀಗಿದ್ದರೆ, ಎಂಟು ಮಂದಿ ಸರ್ಕಾರಿ ಅನುಮೋದಕರಾಗಿ ಮಾರ್ಪಟ್ಟರು. ಆರು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. 950 ಕೋಟಿ ರೂಪಾಯಿ ಮೊತ್ತದ ಮೇವು ಹಗರಣವನ್ನು ಮೊದಲ ಬಾರಿಗೆ ಅಂದಿನ ಚೈಬಾಸಾ ಜಿಲ್ಲಾಧಿಕಾರಿ ಅಮಿತ್ ಖರೆ ಬಯಲಿಗೆಳೆದಿದ್ದರು.