ಹನುಮಾನ್ ಚಾಲೀಸಾ ವಿವಾದ: ರಾಣಾ ದಂಪತಿ ಮೇಲೆ ದೇಶದ್ರೋಹ ಪ್ರಕರಣ ದಾಖಲು
ಹನುಮಾನ್ ಚಾಲೀಸಾ ವಿವಾದದಲ್ಲಿ ಪಕ್ಷೇತರ ಸಂಸದೆ ನವನೀತ್ ರಾಣಾ ಮತ್ತು ಆಕೆಯ ಪತಿ ಶಾಸಕ ರವಿ ರಾಣಾ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಬಾಂದ್ರಾ ಮ್ಯಾಜಿಸ್ಟ್ರೇಟ್ ಕೋರ್ಟ್ ಕಳುಹಿಸಿದ್ದರೂ ಮುಂಬೈ ಪೊಲೀಸರು ಭಾನುವಾರ ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. ಇದರಿಂದಾಗಿ ರಾಣಾ ದಂಪತಿಗೆ ತೀವ್ರ ಹಿನ್ನೆಡೆಯಾಗಿದೆ.
Published: 24th April 2022 05:30 PM | Last Updated: 24th April 2022 05:37 PM | A+A A-

ಸಂಸದೆ ನವನೀತ್ ರಾಣಾ, ಶಾಸಕ ರವಿ ರಾಣಾ
ಮುಂಬೈ: ಹನುಮಾನ್ ಚಾಲೀಸಾ ವಿವಾದದಲ್ಲಿ ಪಕ್ಷೇತರ ಸಂಸದೆ ನವನೀತ್ ರಾಣಾ ಮತ್ತು ಆಕೆಯ ಪತಿ ಶಾಸಕ ರವಿ ರಾಣಾ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಬಾಂದ್ರಾ ಮ್ಯಾಜಿಸ್ಟ್ರೇಟ್ ಕೋರ್ಟ್ ಕಳುಹಿಸಿದ್ದರೂ ಮುಂಬೈ ಪೊಲೀಸರು ಭಾನುವಾರ ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. ಇದರಿಂದಾಗಿ ರಾಣಾ ದಂಪತಿಗೆ ತೀವ್ರ ಹಿನ್ನೆಡೆಯಾಗಿದೆ.
ರಾಣಾ ಜಾಮೀನು ಅರ್ಜಿ ತುರ್ತು ವಿಚಾರಣೆಗೆ ನ್ಯಾಯಾಲಯ ನಿರಾಕರಿಸಿದ್ದು, ಏಪ್ರಿಲ್ 29 ರ ಶುಕ್ರವಾರದಂದು ಮುಂದಿನ ವಿಚಾರಣೆ ಕೈಗೊಳ್ಳಲಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರದೀಪ್ ಘಾರಟ್ ಹೇಳಿದ್ದಾರೆ. ಪೊಲೀಸರು ದಾಖಲಿಸಿರುವ ಪ್ರಕರಣ ಸುಳ್ಳು ಎಂದು ರಾಣಾ ದಂಪತಿ ಪರ ವಕೀಲ ರಿಜ್ವಾನ್ ಮರ್ಚೆಂಟ್ ವಾದಿಸಿದ್ದಾರೆ. ಒತ್ತಡದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣ ಆಧಾರ ರಹಿತ ಮತ್ತು ದಂಪತಿ ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹನುಮಾನ್ ಚಾಲೀಸಾ ವಿವಾದ: ರಾಣಾ ದಂಪತಿಗೆ 14 ದಿನ ನ್ಯಾಯಾಂಗ ಬಂಧನ
ದೇಶದ್ರೋಹಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 124(ಎ) ನಂತಹ ಅತಿಶಯದ ಆರೋಪದೊಂದಿಗೆ ಎರಡು ವಿಭಿನ್ನ ಎಫ್ ಐಆರ್ ಗಳನ್ನು ಪೊಲೀಸರು ದಾಖಲಿಸಿದ್ದಾರೆ. ಆದರೆ, ರಿಮಾಂಡ್ ಅರ್ಜಿಯಲ್ಲಿ ಅದನ್ನು ಉಲ್ಲೇಖಿಸಿಲ್ಲ ಮತ್ತು ನ್ಯಾಯಾಲಯದ ಮುಂದೆ ಈ ಆರೋಪವನ್ನು ವಿವರಿಸಲು ಸರ್ಕಾರಿ ವಕೀಲರು ವಿಫಲರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ನ್ಯಾಯಾಲಯ ತೀರ್ಪಿನ ನಂತರ ದಂಪತಿ ನಿರಾಶೆಯಿಂದ ಹೊರಬಂದರು. ನವನೀತ್ ರಾಣಾ ಅವರನ್ನು ಬೈಕುಲ್ಲಾ ಮಹಿಳಾ ಜೈಲಿಗೆ ಮತ್ತು ರವಿ ರಾಣಾನನ್ನು ಅರ್ಥರ್ ರಸ್ತೆಯಲ್ಲಿರುವ ಸೆಂಟ್ರಲ್ ಜೈಲಿಗೆ ಕರೆದೊಯ್ಯುವ ಸಾಧ್ಯತೆಯಿದೆ.
ಬಾಂದ್ರಾದಲ್ಲಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸದ ಹೊರಗೆ ಹನುಮಾನ್ ಚಾಲೀಸಾ ಪಠಾಣವನ್ನು ರಾಣಾ ದಂಪತಿ ಕೈ ಬಿಟ್ಟ ನಂತರ ವಿವಿಧ ಸಮುದಾಯಗಳು ಹಾಗೂ ಗುಂಪುಗಳ ನಡುವೆ ದ್ವೇಷ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ರಾಣಾ ದಂಪತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದರು.